ಬೆಳಗಾವಿ: ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ವಕ್ಫ್ ವಿರುದ್ಧ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯೇಂದ್ರನ ಹೊಂದಾಣಿಕೆ ರಾಜಕಾರಣಕ್ಕೆ ಬೇಸತ್ತು ನಾವು ಪ್ರತ್ಯೇಕ ಹೋರಾಟ ಮಾಡುತ್ತಿದ್ದೇವೆ. ನೀವು ಬೇಕಾದರೆ ಪ್ರತ್ಯೇಕವಾಗಿ ಹೋರಾಟ ಮಾಡಿ. ವಿಜಯೇಂದ್ರನ ಹೊಂದಾಣಿಕೆ ರಾಜಕಾರಣವನ್ನು ಸಮಯದ ಸಂದರ್ಭ ನೋಡಿಕೊಂಡು ಹೇಳುತ್ತೇನೆ ಎಂದಿದ್ದಾರೆ.
ಬೀದರ್ದಿಂದ ವಕ್ಫ್ ಹೋರಾಟ ಮಾಡುತ್ತಿದ್ದೇವೆ. ಆದರೆ, ನಾವು ಮಾಡುತ್ತಿರುವುದು ಜನಪರ ಹೋರಾಟ. ನೀವು ಮಾಡುತ್ತಿರುವುದು ಏನು? ಉಪ ಚುನಾವಣೆಯ ಸೋಲು ಕೂಡ ನಿಮಗೆ ನೋವು ನೀಡಿಲ್ಲ. ಗಂಭೀರವಾಗಿ ನೀವು ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಪಕ್ಕದ ಆಂಧ್ರಪ್ರದೇಶದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡಲಾಗಿದೆ. ನೀವು ಕೂಡ ಜನಪರ ಧ್ವನಿ ಎತ್ತುವುದನ್ನು ಬಿಟ್ಟು ಉಚ್ಛಾಟನೆ ಮಾಡುವ ಯತ್ನ ಮಾಡುತ್ತಿದ್ದೀರಿ. ಯಾವುದೇ ಗಂಭೀರ ಹೋರಾಟಗಳು ನಿಮ್ಮಿಂದ ಆಗುತ್ತಿಲ್ಲ. ನಾವು ಮಾಡುತ್ತಿದ್ದರೆ, ಪಕ್ಷ ವಿರೋಧಿ ಅಂತಾ ಹೇಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.