ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ವೇಳೆ ಕಾರು ನಿಲ್ಲಿಸದೆ ಬ್ಯಾರಿಕೇಡ್ ಗುದ್ದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಯನ್ನು ಜಾಲಹಳ್ಳಿ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿದ್ಯಾರಣ್ಯಪುರ ನಿವಾಸಿ ಕಿರಣ್ (30) ಎಂದು ಗುರುತಿಸಲಾಗಿದೆ. ಕಳೆದ ತಿಂಗಳು 21ರಂದು ಜಾಲಹಳ್ಳಿ ಸಂಚಾರಿ ಠಾಣಾ ವ್ಯಾಪ್ತಿಯ ಸಾಹಿತ್ಯಕೂಟ ಜಂಕ್ಷನ್ ಬಳಿ ಈ ಘಟನೆ ನಡೆದಿತ್ತು.
ಕುಡಿದು ವಾಹನ ಚಲಾಯಿಸುತ್ತಿದ್ದ ಕಿರಣ್, ಡಿಡಿ ಪರಿಶೀಲನೆ ವೇಳೆ ಬ್ಯಾರಿಕೇಡ್ ಗೆ ಗುದ್ದಿ ಪರಾರಿಯಾಗಿದ್ದ. ಗುದ್ದಿ ಹೋಗಿದ್ದ ಅಲ್ಟ್ರೋಸ್ ಕಾರಿನ ನಂಬರ್ ನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆನಂತರ ಸಿಸಿಟಿವಿ ಪರಿಶೀಲನೆ ನಡೆಸಿ, ಆರೋಪಿ ಕಿರಣ್ ನನ್ನು ಬಂಧಿಸಿದ್ದಾರೆ. ಈ ಕುರಿತು ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.