ಬೆಂಗಳೂರು: ದೇಶದ ಎಲ್ಲ ಸೈನಿಕರು, ಸೇನಾಧಿಕಾರಿಗಳಿಗೆ ದಂತ ಚಿಕಿತ್ಸೆ ನೀಡಲು ರಚಿಸಿರುವ ಆರ್ಮಿ ಡೆಂಟಲ್ ಕಾರ್ಪ್ಸ್ ನಲ್ಲಿ ಖಾಲಿ ಇರುವ 30 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್ (ಎಸ್ ಎಸ್ ಸಿ) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಆರ್ಮಿ ಡೆಂಟಲ್ ಕಾರ್ಪ್ಸ್
ಒಟ್ಟು ಹುದ್ದೆಗಳು: 30
ಹುದ್ದೆಗಳ ಹೆಸರು: ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್
ಉದ್ಯೋಗ ಸ್ಥಳ: ದೇಶಾದ್ಯಂತ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ 17
ಬ್ಯಾಚಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಹಾಗೂ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಕೊರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹಾಗೆಯೇ, ಅಭ್ಯರ್ಥಿಗಳು ಕಳೆದ ಏಪ್ರಿಲ್ ನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 60 ಸಾವಿರ ರೂಪಾಯಿಯಿಂದ 1.2 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಗರಿಷ್ಠ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ನಂತರ ಸಂದರ್ಶನ ನಡೆಸಲಾಗುತ್ತದೆ. ಇದಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳಿಗೆ 200 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವವರು https://join.afms.gov.in/ ವೆಬ್ ಸೈಟ್ ಗೆ ಭೇಟಿ ನೀಡಿ, ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.



















