ಪಾಟ್ನಾ: ದೊಡ್ಡ ದೊಡ್ಡ ಚಿನ್ನಾಭರಣಗಳಿಗೆ ನುಗ್ಗಿ, ಅಲ್ಲಿದ್ದ ಸಿಬ್ಬಂದಿಗೆಲ್ಲ ಬಂದೂಕು ತೋರಿಸಿ ದರೋಡೆ ಮಾಡುವ ದೃಶ್ಯಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ ಆರೇಳು ಖತರ್ನಾಕ್ ಕಳ್ಳರು ತನಿಷ್ಕ್ ಚಿನ್ನಾಭರಣ ಶೋರೂಮ್ ಗೆ ನುಗ್ಗಿ ಸುಮಾರು 25 ಕೋಟಿ ರೂಪಾಯಿ ಮೊತ್ತದ ಚಿನ್ನಾಭರಣ, ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಸಿನಿಮೀಯ ರೀತಿಯ ಕಳ್ಳತನದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ನುಗ್ಗಿದ ದರೋಡೆಕೋರರು ಚೈನ್, ನೆಕ್ಲೇಸ್, ಬಳೆ, ವಜ್ರ ಸೇರಿ ಸುಮಾರು 25 ಕೋಟಿ ರೂ. ಮೊತ್ತದ ಚಿನ್ನಾಭರಣ, ಹಣವನ್ನು ದರೋಡೆ ಮಾಡಿದ್ದಾರೆ. ನಾವು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೂ, ಪೊಲೀಸರು ಸರಿಯಾದ ಸಮಯಕ್ಕೆ ಬಂದು ಕಳ್ಳರನ್ನು ಹಿಡಿಯಲು ಆಗಲಿಲ್ಲ ಎಂದು ಶೋರೂಮ್ ಮ್ಯಾನೇಜರ್ ಕುಮಾರ್ ಮೃತ್ಯುಂಜಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೂರೂಮ್ಗೆ ನುಗ್ಗುವ ಕಳ್ಳರು, ಸಿಬ್ಬಂದಿಗೆ ಗನ್ ತೋರಿಸಿ, ಅವರನ್ನು ಬೆದರಿಸಿ, ಚಿನ್ನಾಭರಣಗಳನ್ನು ಬ್ಯಾಗ್ಗಳಿಗೆ ತುಂಬಿಕೊಂಡು ಹೋದ ವಿಡಿಯೊ ಸಿಸಿಟಿವಿಯಲ್ಲಿಸೆರೆಯಾಗಿದೆ. ಸಿನಿಮಾ ಸ್ಟೈಲಲ್ಲಿ ನಡೆದ ಕಳ್ಳತನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿದೆ. ಹಾಡಹಗಲೇ ಇಂತಹ ಪ್ರಕರಣ ನಡೆದಿರುವುದು ಜನರಲ್ಲಿ ಆತಂಕವನ್ನೂ ಮೂಡಿಸಿದೆ.
ಕಳ್ಳರು ಪೊಲೀಸರು ಆಗಮಿಸುವ ಮೊದಲೇ ಅಲ್ಲಿಂದ ಪರಾರಿಯಾಗಿದ್ದರು. ಕಳ್ಳರನ್ನು ಬೆನ್ನತ್ತಿದ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ, ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅನಾಮಧೇಯ ಕಳ್ಳರ ವಿರುದ್ಧ ತನಿಷ್ಕ್ ಚಿನ್ನಾಭರಣ ಮಳಿಗೆಯು ದೂರು ನೀಡಿದೆ. ಇದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.