ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಂದೆಯಂತೆ ಮಿಂಚಬೇಕೆಂದು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಈಗ 9 ವಿಕೆಟ್ ಪಡೆದು ಬಿಸಿಸಿಐ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.
ಅರ್ಜುನ್ ತೆಂಡೂಲ್ಕರ್ ದೇಶೀ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಡಾಕ್ಟರ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಟೂರ್ನಮೆಂಟ್ ನಲ್ಲಿ ಗೋವಾ ಪರ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಕೆಎಸ್ ಸಿಎ ಇಲೆವೆನ್ ತಂಡದ ವಿರುದ್ಧ 9 ವಿಕೆಟ್ ಉರುಳಿಸುವ ಮೂಲಕ ಗೋವಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೆಡ್ ಬಾಲ್ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಅರ್ಜುನ್, ಗೋವಾ ತಂಡವು ಇನ್ನಿಂಗ್ಸ್ ಮತ್ತು 189 ರನ್ ಗಳಿಂದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅರ್ಜುನ್ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಗಳನ್ನು ಉರುಳಿಸುವ ಮೂಲಕ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ದಾಳಿಯ ಮುಂದೆ ಕೆಎಸ್ ಸಿಎ ಇಲೆವೆನ್ ತಂಡದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ನಡೆಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 41 ರನ್ ಗಳಿಗೆ 5 ವಿಕೆಟ್ ಪಡೆದಿದ್ದ ಅರ್ಜುನ್, ಎದುರಾಳಿ ತಂಡದ ಮೊದಲ ಐದು ಬ್ಯಾಟ್ಸಮನ್ ಗಳ ಪೈಕಿ ನಾಲ್ವರನ್ನು ಬಲಿ ಪಡೆದಿದ್ದರು. ನಂತರ ಆಕ್ಷನ್ ರಾವ್ ಅವರ ವಿಕೆಟ್ ಪಡೆಯುವ ಮೂಲಕ ಐದು ವಿಕೆಟ್ ಪೂರ್ಣಗೊಳಿಸಿದ್ದಾರೆ.
ಅರ್ಜುನ್ ದಾಳಿಗೆ ನಲುಗಿದ ಕೆಎಸ್ ಸಿಎ ಇಲೆವೆನ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 103 ರನ್ ಗಳಿಸಿತು. ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗೋವಾ ತಂಡ ಮೊದಲ ಇನಿಂಗ್ಸ್ ನಲ್ಲಿ 413 ರನ್ ಗಳಿಸಿತು.
ಎರಡನೇ ಇನ್ನಿಂಗ್ಸ್ ನಲ್ಲಿಯೂ ಉತ್ತಮ ದಾಳಿ ನಡೆಸಿದ ಅರ್ಜುನ್, ಕೆಎಸ್‌ಸಿಎ ಇಲೆವೆನ್ ತಂಡವನ್ನು ಕೇವಲ 121 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಜುನ್ 55 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಈ ಪಂದ್ಯದಲ್ಲಿ 9 ವಿಕೆಟ್ ಪಡೆದು ಮಿಂಚಿದರು.