ಬೆಂಗಳೂರು: ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಲಗ್ಗೇರೆಯ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ.
ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ರಕ್ಷಿತಾ ನಾಲ್ಕು ವರ್ಷದ ಹಿಂದೆ ರವೀಶ್‌ನನ್ನು ಮದುವೆಯಾಗಿದ್ದರು. ಕಳೆದ ಮೂರು ವರ್ಷದಿಂದ ರವೀಶ್ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ರವೀಶ್ ಜೊತೆ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭಾನುವಾರ ರಾತ್ರಿ ಕೂಡ ರಕ್ಷಿತಾ ಜೊತೆ ರವೀಶ್ ಹಾಗೂ ಲೋಕೇಶ್ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ರಕ್ಷಿತಾ ಇಂದು(ಸೋಮವಾರ) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರವೀಶ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ. ಗಂಡನೇ ರಕ್ಷಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮೂರು ವರ್ಷದ ಹೆಣ್ಣು ಮಗುವಿನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.