ಬೆಂಗಳೂರು: ಆಧುನಿಕ ಕಾಲದಲ್ಲಿ ಒಬ್ಬ ವ್ಯಕ್ತಿಯ ಶಿಸ್ತನ್ನು ಕ್ರೆಡಿಟ್ ಸ್ಕೋರ್ ಮೂಲಕವೇ ಅಳೆಯಲಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆ, ಬಿಲ್ ಗಳ ಪಾವತಿ, ಸಾಲದ ಇಎಂಐ ಪಾವತಿ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುತ್ತದೆ. ಅಷ್ಟೇ ಅಲ್ಲ, ನೀವು ಮನೆ, ಅಪಾರ್ಟ್ ಮೆಂಟ್ ಖರೀದಿಗೆ ಸಾಲ ಮಾಡಲು ಹೋದರೆ, ಬ್ಯಾಂಕುಗಳು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆಯೇ ಸಾಲ ನೀಡುತ್ತವೆ. ಹಾಗಾಗಿ, ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವುದು ಈಗ ಮುಖ್ಯವಾಗಿದೆ.
ನಿಮ್ಮ ಸ್ಕೋರ್ ಹೆಚ್ಚಿದ್ದರೆ ಈ ವ್ಯಕ್ತಿ ಸಾಲವನ್ನು ಸರಿಯಾಗಿ ಮರುಪಾವತಿ ಮಾಡುತ್ತಾರೆ, ಇವರಿಗೆ ನಂಬಿ ಸಾಲ ಕೊಡಬಹುದು ಎಂದು ಬ್ಯಾಂಕ್ಗಳು ತೀರ್ಮಾನಿಸುತ್ತವೆ. ಒಂದು ವೇಳೆ ಸ್ಕೋರ್ ಕಡಿಮೆ ಇದ್ದರೆ, ಬ್ಯಾಂಕ್ಗಳಿಗೆ ನಿಮ್ಮ ಮೇಲೆ ಅನುಮಾನ ಬರುತ್ತದೆ. ಸಾಮಾನ್ಯವಾಗಿ, HDFC, ICICI, ಆಕ್ಸಿಸ್ನಂತಹ ದೊಡ್ಡ ಬ್ಯಾಂಕ್ಗಳು ಗೃಹ ಸಾಲ ನೀಡಲು ಕನಿಷ್ಠ 650ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಅನ್ನು ನಿರೀಕ್ಷಿಸುತ್ತವೆ. 750ಕ್ಕಿಂತ ಹೆಚ್ಚಿದ್ದರೆ ಇನ್ನೂ ಉತ್ತಮ. ಆಗ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ.
ಆದರೆ, ನಿಮ್ಮ ಸ್ಕೋರ್ 500ರ ಆಸುಪಾಸಿನಲ್ಲಿದ್ದರೆ ಬ್ಯಾಂಕ್ಗಳು ನಿಮ್ಮನ್ನು ‘ರಿಸ್ಕ್’ ಎಂದು ಪರಿಗಣಿಸುತ್ತವೆ. ಆಗ ಬ್ಯಾಂಕ್ ನೇರವಾಗಿ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು. ಒಂದು ವೇಳೆ ಸಾಲ ಕೊಟ್ಟರೂ, ಬೇರೆಯವರಿಗಿಂತ ಹೆಚ್ಚು ಬಡ್ಡಿ ವಿಧಿಸುತ್ತಾರೆ. ಉತ್ತಮ ಸ್ಕೋರ್ ಇದ್ದವರಿಗೆ 8% ಬಡ್ಡಿ ಹಾಕಿದರೆ, ನಿಮಗೆ 10-11% ಅಥವಾ ಅದಕ್ಕಿಂತ ಹೆಚ್ಚು ಹಾಕಬಹುದು. ಇದರಿಂದ ನಿಮ್ಮ EMI ಹೊರೆ ಹೆಚ್ಚಾಗುತ್ತದೆ.
ಮನೆಯ ಮೌಲ್ಯದ ಬೃಹತ್ ಮೊತ್ತವನ್ನು ನೀವೇ ಮುಂಗಡವಾಗಿ ಪಾವತಿಸಬೇಕೆಂದು ಬ್ಯಾಂಕ್ ಕೇಳಬಹುದು. ಸಾಲಕ್ಕೆ ಗ್ಯಾರಂಟಿಯಾಗಿ ಬೇರೆ ವ್ಯಕ್ತಿಯನ್ನು ಅಥವಾ ಹೆಚ್ಚುವರಿ ಆಸ್ತಿಯನ್ನು ಅಡಮಾನವಾಗಿ ಇಡಲು ಕೇಳಬಹುದು. ಹಾಗಾಗಿ, ಪ್ರತಿಯೊಬ್ಬರೂ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದುವುದು ತುಂಬ ಪ್ರಮುಖ ಸಂಗತಿಯಾಗಿದೆ.