ಬೆಂಗಳೂರು: ಇಡ್ಲಿ ಮತ್ತು ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಸುದ್ದಿಯ ಬೆನ್ನಲ್ಲೇ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಈಗ ಚಹಾಪ್ರಿಯರಿಗೂ ಶಾಕ್ ಎದುರಾಗುವಂತಾಗಿದೆ.
ಈಗಾಗಲೇ ಬೇಳೆ, ಬೆಲ್ಲ ಸೇರಿದಂತೆ ಕೆಲವು ಪದಾರ್ಥಗಳಲ್ಲಿ ರಾಸಾಯನಿಕ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈಗ ಚಹಾಪುಡಿಗೂ ಕಂಟಕ ಬಂದಿದೆ. ಹಲವೆಡೆ ಚಹಾ ಪುಡಿ ಸೇರಿದಂತೆ ಹಲವಾರು ವಸ್ತುಗಳು ಕಲಬೆರಕೆಯಾಗಿರುವುದು ಕಂಡು ಬಂದಿದೆ. ಕಡಿಮೆ ಗುಣಮಟ್ಟದ ದರ್ಜೆಯ ಚಹಾ ಹಾಗೂ ಹಿಂದೆ ತಯಾರಿಸಿದ ಚಹಾ ಪುಡಿಯನ್ನೇ ಒಣಗಿಸಿ ಬಳಸುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಕೃತಕ ಬಣ್ಣ ಬಳಸಿ ಬಳಸಲಾಗುತ್ತಿದೆ. ಅಲ್ಲದೇ, ‘ಹೆಚ್ಚಿನ ಅಂಗಡಿಗಳು ಕುದಿಸಿದ ಚಹಾ ಪುಡಿಯನ್ನು ಇತರ ತ್ಯಾಜ್ಯದೊಂದಿಗೆ ಬೆರೆಸುವುದಿಲ್ಲ. ಬದಲಿಗೆ, ಅದನ್ನು ಒಣಗಿಸಿ ಮರುಬಳಕೆ ಮಾಡುತ್ತವೆ’ ಎಂಬುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಅಲ್ಲದೇ, ಹಲವು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಸಾಲೆಗಳನ್ನು ಬಳಕೆ ಮಾಡುತ್ತಿರುವುದು ತಿಳಿದು ಬಂದಿದೆ. ಹೆಚ್ಚಿನ ಬೇಡಿಕೆಯಿರುವ ಮತ್ತು ಪುಡಿ ರೂಪದಲ್ಲಿರುವ ಅರಿಶಿನ, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಗಳು ಸಾಮಾನ್ಯವಾಗಿ ಕಲಬೆರಕೆಯಾಗುತ್ತಿವೆ. ಅರಿಶಿನವನ್ನು ಹೆಚ್ಚಾಗಿ ಮೆಟಾನಿಲ್ ಹಳದಿ, ಸಂಶ್ಲೇಷಿತ ಬಣ್ಣ ಅಥವಾ ಸೀಸದ ಕ್ರೋಮೇಟ್‌ನೊಂದಿಗೆ ಬೆರೆಸಿ ಬಣ್ಣ ಹೆಚ್ಚಿಸಲಾಗುತ್ತಿದೆ. ಇವೆರಡೂ ಹಾನಿಕಾರಕವಾಗಿವೆ. ಮೆಣಸಿನ ಪುಡಿಯನ್ನು ಸುಡಾನ್ ರೆಡ್ ನಂತಹ ಕೃತಕ ಬಣ್ಣಗಳೊಂದಿಗೆ ಕಲಬೆರಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕ ಎಂಬುವುದನ್ನು ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.
‘ಮೆಟಾನಿಲ್ ಹಳದಿ, ಸೀಸದ ಕ್ರೋಮೇಟ್ ಮತ್ತು ಸುಡಾನ್ ಕೆಂಪು ಮುಂತಾದ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಿರುವ ಮಸಾಲೆಗಳು ಜೀರ್ಣಕಾರಿ ಸಮಸ್ಯೆಗಳು, ಯಕೃತ್ತು ಮತ್ತು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನರ ವೈಜ್ಞಾನಿಕ ಅಸ್ವಸ್ಥತೆಗಳು, ಉಸಿರಾಟದ ತೊಂದರೆಗಳು ಮತ್ತು ಅಂಗಗಳ ಕಾರ್ಯವು ದುರ್ಬಲಗೊಳ್ಳುತ್ತದೆ. ಹೀಗಾಗಿ ಆಹಾರ ಕೊಳ್ಳುವ ಮುನ್ನ ಎಚ್ಚರವಾಗಿರಬೇಕು ಎಂದು ತಜ್ಞರು ಕಿವಿ ಮಾತು ಹೇಳಿದ್ದಾರೆ.