ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಟೋ ದರ ಪರಿಷ್ಕರಣೆ ಕುರಿತು ಸಭೆ ನಡೆದಿದ್ದು, ಮುಕ್ತಾಯವಾಗಿದೆ. ಈ ವೇಳೆ ಎಷ್ಟು ದರ ಏರಿಕೆ ಮಾಡಬೇಕು ಎಂಬ ಕುರಿತು ಆಟೋ ಯೂನಿಯನ್ ಗೆ ಒಂದು ವಾರದ ಕಾಲಾವಕಾಶ ನೀಡಲಾಗಿದೆ.
ಸಭೆಯ ನಂತರ ಮಾತನಾಡಿದ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಪ್ರತಿ ಎರಡು ತಿಂಗಳಿಗೊಮ್ಮೆ RTA ಸಭೆ ನಡೆಯುತ್ತಿದೆ. ಆಟೋ ದರ ಏರಿಕೆಯ ಹಿನ್ನೆಲೆಯಲ್ಲಿ ಕಳೆದ ಮೀಟಿಂಗ್ ನಲ್ಲಿ ಉಪ ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಇಂದು ಸಮಿತಿಯ ಸಭೆ ನಡೆದಿದೆ.
ಸಭೆಯಲ್ಲಿ ಆಟೋ ಯೂನಿಯನ್ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಒಂದು ವಾರ ಅವರಿಗೆ ಸಮಯಾವಕಾಶ ನೀಡಿದ್ದೇವೆ. ಅಲ್ಲದೇ, ದರ ಪರಿಷ್ಕರಣೆಯ ಕುರಿತು ಶಾಂತಿನಗರ ಆರ್ ಟಿಓ ಗೆ ಮನವಿ ಸಲ್ಲಿಸಲು ತಿಳಿಸಿದ್ದೇವೆ. ಅರ್ಜಿ ಸ್ವಿಕೃತಿಯಾದ ಬಳಿಕ ಬೆಂಗಳೂರು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಆನಂತರ ಒಂದು ವಾರದ ಬಳಿಕ ಆಟೋ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಆಟೋ ಚಾಲಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಿ ನಂತರ ತೀರ್ಮಾನ ಮಾಡುತ್ತೇವೆ. ಸಭೆಯಲ್ಲಿ ದರ ಏರಿಕೆ ಬಗ್ಗೆ ಪರ ವಿರೋಧ ವ್ಯಕ್ತವಾಗಿದೆ. ಅರ್ಜಿಗಳು ಬಂದ ನಂತ್ರ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಆದರ್ಶ್ ಆಟೋ ಯೂನಿಯನ್ ನ ಮಂಜುನಾಥ್ ಮಾತನಾಡಿ, ಬೆಂಗಳೂರು ನಗರದಲ್ಲಿ 16 ರಿಂದ 18 ಸಂಘಟನೆಗಳಿವೆ. ಅದರಲ್ಲಿ 15 ಆಟೋ ಚಾಲಕರ ಯೂನಿಯನ್ ಆಟೋ ದರ ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ.ಒಂದು ಕಿ.ಮೀ 15 ರೂಪಾಯಿ ಇದೆ. ಅದನ್ನು 20 ರೂಪಾಯಿಗೆ ಏರಿಕೆ ಮಾಡಬೇಕು. ಮಿನಿಮಮ್ ದರವನ್ನು 40 ರೂಪಾಯಿಗೆ ಏರಿಕೆ ಮಾಡಬೇಕು. ಗ್ಯಾಸ್ ಬೆಲೆ , ಟೈರ್ ಬೆಲೆ, ಇನ್ಶೂರೆನ್ಸ್ , ಬಾಡಿಗೆ ದರ, ಅಗತ್ಯ ವಸ್ತುಗಳ ದರ ಏರಿಕೆ ಯಾಗಿದೆ. ಅಗತ್ಯ ವಸ್ತುಗಳ ಎಲ್ಲ ದರ ಏರಿಕೆಯಾಗಿದೆ. ಹೀಗಾಗಿ RTA ಗೆ ಒಂದು ವಾರದ ಸಮಯಾವಕಾಶ ನೀಡಿದ್ದೇವೆ. ಒಂದು ವಾರದಲ್ಲಿ ಏರಿಕೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಓಲಾ, ಊಬರ್ ಚಾಲಕರು ಕೂಡ ಇದ್ದರು.