ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ಮಾರ್ಚ್ 17 ರಂದು ಅವರ ಅಭಿಮಾನಿಗಳು ಆಚರಿಸಿದರು. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೆಂಟರ್ ಮತ್ತು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik), ಪುನೀತ್ ರಾಜ್‌ಕುಮಾರ್ ಅವರನ್ನು ಬಹುವಾಗಿ ಹೊಗಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪರಂಪರೆ ಜೀವಂತವಾಗಿದೆ ಮತ್ತು ಅವರ ಉಪಸ್ಥಿತಿ ಎಲ್ಲೆಡೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್. “ನಾನು ಚೆನ್ನೈನಿಂದ ಬಂದಿದ್ದೇನೆ. ನಾನು ಸಿನಿಮಾ ಪ್ರಿಯ. ರಜನಿ, ಕಮಲ್, ವಿಜಯ್, ಅಜಿತ್, ಧನುಷ್, ವಿಜಯ್ ಸೇತುಪತಿ ಅವರಂತಹ ದೊಡ್ಡ ಸಿನಿಮಾ ತಾರೆಯರು ನಮ್ಮಲ್ಲಿದ್ದಾರೆ. ಆದರೆ, ಮೂರು ವರ್ಷಗಳ ಕಾಲ RCB ಪರ ಆಡುವಾಗ, ಬೆಂಗಳೂರಿನಲ್ಲಿ ಸಮಯ ಕಳೆದಿದ್ದೇನೆ. ಈ ಅವಧಿಯಲ್ಲಿ ಕನ್ನಡಿಗರು ಇಷ್ಟಪಡುವ ಡಾ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಗೊತ್ತಾಯಿತು.” ಎಂದು ಹೇಳಿದ್ದಾರೆ.
“ಪುನೀತ್ ಅವರ ಪೋಸ್ಟರ್‌ಗಳು, ಅವರ ಹೆಸರಿನ ರಸ್ತೆಗಳು ಮತ್ತು ಅಂಗಡಿಗಳಿಗೆ ಅವರ ಹೆಸರನ್ನು ಇಡಲಾಗಿದೆ. ಇದನ್ನು ನೋಡಿದರೆ, ಪುನೀತ್ ರಾಜ್‌ಕುಮಾರ್ ಅವರ ಪರಂಪರೆ ನಗರದ ಮೂಲೆ ಮೂಲೆಗಳಲ್ಲಿ ಇನ್ನೂ ಜೀವಂತವಾಗಿದೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಾನು ಆ ದಂತಕಥೆಗೆ ದೊಡ್ಡ ಸಲಾಂ ಹೇಳಲು ಬಯಸುತ್ತೇನೆ,” ಎಂದು ಕಾರ್ತಿಕ್ ಹೇಳಿದ್ದಾರೆ.
”ಅವರ ಪ್ರೇರಣೆ ಮತ್ತು ಸ್ಫೂರ್ತಿ ಮುಂದುವರಿಯುತ್ತಿದೆ. ಅವರ ಮ್ಯಾಜಿಕ್ ಅನ್ನು ಪರದೆಯ ಮೇಲೆ ಅನುಭವಿಸುವ ಸಮಯ ಬಂದಿದೆ, ವಿಶೇಷವಾಗಿ ಅವರ ಸಿನಿಮಾವನ್ನು ಎಲ್ಲರೂ ವೀಕ್ಷಿಸುತ್ತಿದ್ದಾರೆ. ನಾನು ಅವರ ಯಾವ ಸಿನಿಮಾದಿಂದ ಪ್ರಾರಂಭಿಸಲಿ ಎಂದು ನೀವು ಸಲಹೆ ನೀಡಿ. ಕೆಳಗಿನ ಕಾಮೆಂಟ್‌ಗಳಲ್ಲಿ ತಿಳಿಸಿ.,” ಎಂದು ದಿನೇಶ್ ಕಾರ್ತಿಕ್ ಭಾವುಕರಾಗಿ ನುಡಿದರು.
ದಿನೇಶ್ ಕಾರ್ತಿಕ್ ಅವರಿಗೆ ಅಭಿಮಾನಿಗಳ ಮೆಚ್ಚುಗೆ**
ಪುನೀತ್ ರಾಜ್‌ಕುಮಾರ್ ಅವರನ್ನು ವಿಶೇಷ ಪದಗಳಿಂದ ಹೊಗಳಿದ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ನಿಮ್ಮ ಮೇಲಿನ ಗೌರವ ಹೆಚ್ಚಾಯಿತು ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ ಜಾಕಿ, ಮಿಲನ, ಅರಸು, ಅಪ್ಪು, ಅಭಿ, ಬಿಂದಾಸ್, ರಾಜ್ ಸಿನಿಮಾಗಳನ್ನು ವೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.
2025 ರ ಐಪಿಎಲ್ ಟೂರ್ನಿಗೆ ದಿನಗಣನೆ
ಬಹುನಿರೀಕ್ಷಿತ 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.