ಬೆಂಗಳೂರು: ಕನ್ನಡಾಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜಕುಮಾರ್ (Punith Rajkumar) ಅವರ 50ನೇ ಹುಟ್ಟು ಹಬ್ಬ ಇಂದು. ಹೀಗಾಗಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿ ಬಳಿ ತೆರಳುತ್ತಿರುವ ಅಭಿಮಾನಿಗಳು ನಮನ ಸಲ್ಲಿಸಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.
ಅಪ್ಪು ಬಾರದ ಲೋಕಕ್ಕೆ ಹೋಗಿದ್ದರೂ ಅಪ್ಪು ಅಭಿಮಾನಿಗಳ ಪ್ರೀತಿ, ವಿಶ್ವಾಸ, ಹುಟ್ಟು ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಜೊತೆಗಿರದ ಜೀವವನ್ನು ಜೀವಂತವಾಗಿಸಿಕೊಂಡ ಅಭಿಮಾನಿಗಳು ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿ ಬಳಿ ಹುಟ್ಟು ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.
ಇಂದಿಗೂ ಅಪ್ಪು ಇಲ್ಲ ಎನ್ನುವುದನ್ನು ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಅಂದು ಕಣ್ಣ ಮುಂದೆ ಇದ್ದ ನಮ್ಮ ನಾಯಕ ನಟ. ಇಂದು ದೇವರಾಗಿ ಕುಳಿತಿದ್ದಾರೆ. ಇದನ್ನು ನಂಬಲು ಇಂದಿಗೂ ಅಭಿಮಾನಿಗಳಿಗೆ ಆಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು 50ನೇ ವರ್ಷದ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭಾರೀ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ಇಂದು ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಅಪ್ಪು ಕುಟುಂಬಸ್ಥರು ಪೂಜೆ ಮಾಡಲಿದ್ದಾರೆ. ಬಳಿಕ ಸಮಾಧಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ನಾನಾ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಸಮಾಧಿಯತ್ತ ಬರುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಘೋಷಿಸಿದೆ. ಅದರಂತೆ ಸ್ಫೂರ್ತಿಯ ಚಿಲುಮೆ ಅಪ್ಪು ನೆನಪಲ್ಲಿ ರಾಜ್ಯದೆಲ್ಲೆಡೆ ಅಭಿಮಾನಿಗಳು ತಮ್ಮಿಷ್ಟ ಬಂದಂತೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಂತೂ ಜಾತ್ರೆಯೇ ನಡೆಯಲಿದ್ದು ಅನ್ನದಾನ, ಉಚಿತ ಆರೊಗ್ಯ ತಪಾಸಣೆ, ರಕ್ತದಾನ ಶಿಬಿರ, ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗುತ್ತಿವೆ.