ಬೆಂಗಳೂರು: ಗಾರ್ಮೆಂಟ್ಸ್‌ಗಳಲ್ಲಿ ನಡೆಯುವ ಶೋಷಣೆ ವಿರುದ್ಧ ಮಹಿಳೆ ಧ್ವನಿ ಎತ್ತಿದರೆ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಯನಿರ್ವಹಿಸುವ ಜಾಗದಲ್ಲಿ ಲೈಂಗಿಕ ಕಿರುಕುಳ, ಅಗತ್ಯ ಮೂಲಸೌಕರ್ಯಗಳ ಕೊರತೆ ಇದ್ದಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮುನ್ನಡೆ ಸಾಮಾಜಿಕ ಸಂಸ್ಥೆ, ಸಿವಿಡೆಟ್ ಇಂಡಿಯಾ ಸಂಸ್ಥೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರ ಮಹಾಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಚೌದರಿ ಮಾತನಾಡಿದ್ದಾರೆ.
ಕೆಲಸ ನಿರ್ವಹಿಸುವ ಪ್ರತಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿಗಳನ್ನು ರಚನೆ ಮಾಡಲಾಗಿದೆ. ಗಾರ್ಮೆಂಟ್ಸ್, ಕಚೇರಿಗಳಲ್ಲಿ ಶುದ್ಧ ಕುಡಿವ ನೀರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ಇಲ್ಲವಾದಲ್ಲಿ ಆಯೋಗಕ್ಕೆ ಮಹಿಳೆಯರು ಮಾಹಿತಿ ನೀಡಿದ್ದಲ್ಲಿ ದಿಢೀರ್ ಭೇಟಿ ನೀಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ವಿಧವೆಯರು, ಏಕ ಪೋಷಕರು ಒಳಗೊಂಡಂತೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ಯೋಜನೆಗಳ ಮುಖೇನ ಹಲವು ಸವಲತ್ತು ಕಲ್ಪಿಸಿದ್ದು, ಇವುಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಲೇಖಕಿ ಕೆ.ಶರೀಫಾ, ಬರಹಗಾರ್ತಿ ಪ್ರೊ. ಸಬಿಹಾ ಭೂಮಿಗೌಡ, ಸಮೃದ್ಧಿ ಟ್ರಸ್ಟ್ ನಿರ್ದೇಶಕ ಬಿ.ಶಿವರಾಜೇಗೌಡ ಮಾತನಾಡಿದರು. ಸಿವಿಡೆಟ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕಿ ದೀಪಿಕಾ ರಾವ್, ಮುನ್ನಡೆ ಸಾಮಾಜಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಎಚ್.ಯಶೋಧ ಸೇರಿ ಮತ್ತಿತರರು ಉಪಸ್ಥಿತರಿದ್ದರು.