ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೇಮಕಾತಿ ಅರ್ಜಿಗಳನ್ನು ಸ್ವೀಕರಿಸಿದ 90 ದಿನಗಳೊಳಗೆ ಇತ್ಯರ್ಥಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮೊಹಬೂಬ್ ಪಟೇಲ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಫೆಬ್ರವರಿ 23, 2022ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿತ್ತು.
ಈ ಬಗ್ಗೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಅನುಕಂಪದ ನೇಮಕಾತಿ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಅನುಕಂಪದ ನೇಮಕಾತಿಗಾಗಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿರಲಿ ಅಥವಾ ಇಲ್ಲದಿರಲಿ, ಪ್ರಾಧಿಕಾರ ಸ್ಪಷ್ಟ ಸಂವಹನದೊಂದಿಗೆ 30 ದಿನಗಳೊಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿದಾರರು ವಿಧವೆ, ಅನಕ್ಷರಸ್ಥ ಅಥವಾ ಇತರ ಸಂದರ್ಭಗಳಲ್ಲಿ, ಅರ್ಜಿಯನ್ನು ಸಲ್ಲಿಸುವಲ್ಲಿ ಅವರಿಗೆ ಸಹಾಯ ಮಾಡಲು ಇಲಾಖೆಗಳು ಪೂರ್ವಭಾವಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೋರ್ಟ್ ಹೇಳಿದೆ.
ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿದ ದಿನಾಂಕದಿಂದ 90 ದಿನಗಳ ಒಳಗೆ ನಿರ್ಧರಿಸಬೇಕು. ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲದಿದ್ದರೆ, ಅರ್ಜಿದಾರರಿಗೆ ತಕ್ಷಣವೇ ಸಮಂಜಸವಾದ ಮಾಹಿತಿಯನ್ನು ತಿಳಿಸಬೇಕು ಎಂದು ಸೂಚನೆ ನೀಡಿದೆ.



















