ಕೇರಳ ಸರ್ಕಾರ ಐಎಎಸ್ ಅಧಿಕಾರಿಯನ್ನು ರಾಜ್ಯ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕೇರಳ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರವಾಗಿ ಟೀಕಿಸುತ್ತಿವೆ. ಹೀಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯವನ್ನು ಸ್ವತಂತ್ರ ದೇಶ ಎಂದು ಪರಿಗಣಿಸಬಾರದು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಐಎಎಸ್ ಅಧಿಕಾರಿ ಕೆ ವಾಸುಕಿ ಅವರನ್ನು ‘ರಾಜ್ಯದ ವಿದೇಶಾಂಗ ಕಾರ್ಯದರ್ಶಿ’ಯಾಗಿ ನೇಮಕ ಮಾಡಿರುವುದು ಅಸಾಂವಿಧಾನಿಕ ಮತ್ತು ಫೆಡರಲ್ ತತ್ವಗಳ ಉಲ್ಲಂಘನೆಯಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ಸ್ವಂತ ಕಾನ್ಸುಲೇಟ್ ಹಾಗೂ ವಿದೇಶಾಂಗ ಸಚಿವರ ಅಗತ್ಯವಿರಬಹುದು. ವಿದೇಶಾಂಗ ವ್ಯವಹಾರಗಳು ಕೇಂದ್ರದ ವ್ಯಾಪ್ತಿಗೆ ಬರುತ್ತಿದ್ದು, ಇದರಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುತ್ತಿರುವುದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಸಿಎಂ ಅವರ ಆಪಾದಿತ ಹಣಕಾಸು ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಆ ‘ರಾಜ್ಯ ವಿದೇಶಾಂಗ’ ಕಾರ್ಯದರ್ಶಿಯನ್ನು ನೇಮಿಸಲಾಗಿದೆಯೇ? ಸರ್ಕಾರದ ಈ ನೇಮಕವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ನಾಶಪಡಿಸಲಿದೆ. ಈ ನಿರ್ಧಾರವನ್ನು ಸಿಎಂ ಕೂಡಲೇ ಹಿಂಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಸಂಸದ ಶಶಿ ತರೂರ್ ಕೂಡ ಆಕ್ರೋಶ ವ್ಯಕ್ತಪಡಿಸಿ, ವಿದೇಶಿ ಸಂಬಂಧಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತದೆ. ರಾಜ್ಯ ಸರ್ಕಾರವು ಯಾವುದೇ ಸ್ವತಂತ್ರ ವಿದೇಶಿ ಸಂಬಂಧಗಳನ್ನು ಹೊಂದಿಲ್ಲ. ಆದರೆ ರಾಜ್ಯ ಸರ್ಕಾರಗಳು ತಮ್ಮ ನಿವಾಸಿಗಳನ್ನು ಒಳಗೊಂಡಿರುವ ವಿಷಯಕ್ಕಾಗಿ ವಿದೇಶದಲ್ಲಿ ರಾಯಭಾರ ಕಚೇರಿಗಳಿಲ್ಲದೆ ಕೆಲಸ ಮಾಡುವುದು ಸಂಪೂರ್ಣವಾಗಿ ಸೂಕ್ತವಾಗಿದೆ. ಆದರೆ ಒಬ್ಬ ಅಧಿಕಾರಿಗೆ ಈ ರೀತಿಯ ನಿರ್ದಿಷ್ಟ ಜವಾಬ್ದಾರಿ ನೀಡುವುದು ಅಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.