ಬೆಂಗಳೂರು: ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹಾಗೂ ಈಗಿರುವ ಪಡಿತರ ಚೀಟಿಯಲ್ಲಿ ಯಾವುದೇ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಆನ್ ಲೈನ್ ಮೂಲಕವೇ ತಿದ್ದುಪಡಿ ಹಾಗೂ ಹೊಸ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು 2026ರ ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.
ನಾಗರಿಕರು ಹೊಸ ಕಾರ್ಡಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಇದರ ಜತೆಗೆ, ಪತ್ನಿ ಹಾಗೂ ಮಕ್ಕಳ ಹೆಸರನ್ನು ಸೇರ್ಪಡೆ ಮಾಡುವುದು, ವಿಳಾಸ ಬದಲಾವಣೆ, ಕುಟುಂಬದ ಯಾವುದೇ ಸದಸ್ಯರ ಹೆಸರು ತೆಗೆದುಹಾಕುವುದು, ಆಧಾರ್ ಕಾರ್ಡ್ ನಮೂದಿಸಿ ಇ-ಕೆವೈಸಿ ಪೂರ್ಣಗೊಳಿಸುವುದು, ಫೋಟೋ ನವೀಕರಣ, ಕುಟುಂಬದ ಯಜಮಾನನ ಹೆಸರು ಸೇರ್ಪಡೆ ಅಥವಾ ತೆಗೆದು ಹಾಕುವುದು ಸೇರಿ ಹಲವು ತಿದ್ದುಪಡಿಗಳನ್ನು ಮಾಡಲು ಅವಕಾಶವಿದೆ.
ತಿದ್ದು ಪಡಿ ಮಾಡಲು ಹಲವು ದಾಖಲೆಗಳು ಬೇಕಾಗುತ್ತವೆ. ಕುಟುಂಬದ ಸದಸ್ಯರ ಆಧಾರ್ ಕಾರ್ಡ್, 6 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ ನೀಡಬೇಕು. ಪತ್ನಿಯ ಹೆಸರು ಸೇರ್ಪಡೆಗೆ ಪತ್ನಿಯ ಆಧಾರ್ ಕಾರ್ಡ್, ಮದುವೆ ಸರ್ಟಿಫಿಕೇಟ್ ಸೇರಿ ವಿವಿಧ ದಾಖಲೆ ನೀಡಬೇಕು.
ಅರ್ಜಿ ಸಲ್ಲಿಕೆ ಅಥವಾ ತಿದ್ದುಪಡಿ ಹೇಗೆ?
• ಮೊದಲಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in ಗೆ ಭೇಟಿ ನೀಡಬೇಕು.
• ಇ-ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
• “ತಿದ್ದುಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
• ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
• ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಮದುವೆ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
• ಅರ್ಜಿ ಸಲ್ಲಿಕೆಯ ನಂತರ, ನೀವು ಒಂದು ನೋಂದಣಿ ಸಂಖ್ಯೆಯನ್ನು ಪಡೆಯುತ್ತೀರಿ. ಇದರ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.



















