ಬೆಂಗಳೂರು: ಕರ್ನಾಟಕ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವಲಯ ವಾರ್ಡ್, ಪುರಸಭೆ ಹಾಗೂ ನಗರ ಸಭೆಗಳಲ್ಲಿ ಕಾರ್ಯನಿರ್ವಹಿಸಲು ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಶೇ.40 ಕ್ಕೂ ಅಧಿಕ ಅಂಗವಿಕಲತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ದೃಷ್ಟಿದೋಷ, ಶ್ರವಣ ದೋಷ, ದೈಹಿಕ ಅಂಗವಿಕಲರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ https://dwdsc.karnataka.gov.in ವೆಬ್ ಸೈಟ್ ಅಥವಾ 080-29752324 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 45 ವರ್ಷ ಮೀರಿರಬಾರದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ ವಿಳಾಸಕ್ಕೆ ಸ್ವಯಂ ಆಗಿ ಬರೆದುಕೊಂಡ ಅರ್ಜಿ, ಬಯೋಡೇಟಾ, ಅರ್ಹತೆಗಳ ವಿವರಗಳು ಹಾಗೂ ಪೂರಕ ದಾಖಲೆಗಳನ್ನುಕಳುಹಿಸಬಹುದಾಗಿದೆ. ಮೇ 26 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಸಲ್ಲಿಸಬೇಕಾದ ದಾಖಲೆಗಳು
ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಬಯೋಡೇಟಾ, ಅಂಗವಿಕಲತೆಯ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪ್ರಮಾಣಪತ್ರ, ಭಾವಚಿತ್ರ ಸೇರಿ ಹಲವು ದಾಖಲೆಗಳನ್ನು ನೀಡಬೇಕು. ವಯಸ್ಸಿನ ಅರ್ಹತೆಗಳು, ಅಂಗವಿಕಲ ದೋಷ, ಕಾರ್ಯಾನುಭವ, ಕೌಶಲಗಳು, ಸಂದರ್ಶನದಲ್ಲಿ ತೋರಿದ ಕಾರ್ಯದಕ್ಷತೆಯ ಮಾಹಿತಿ ಆಧರಿಸಿ ನೇಮಕಾತಿ ಮಾಡಲಾಗುತ್ತದೆ.