ಬೆಂಗಳೂರು: ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2006ರಲ್ಲಿ ಹೊರಡಿಸಿದ ಅಧಿಸೂಚನೆಯ ಮುಂದಿನ ಪ್ರಕ್ರಿಯೆಗೆ ಕೊನೆಗೂ ಕಾಲ ಕೂಡಿಬಂದಿದೆ. ಸುಮಾರು 19 ವರ್ಷಗಳ ನಂತರ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (KPSC Recruitment 2025) ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 24 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮೋಟಾರು ವಾಹನ ನಿರೀಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೆಪಿಎಸ್ಸಿಯು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಕೃತ https://kpsc.kar.nic.in/ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆಫ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ಆಯೋಗದ ವೆಬ್ ಸೈಟ್ ಗೆ ಹೋದರೆ ಅಲ್ಲಿ ಅರ್ಜಿಯ ನಮೂನೆ ಸಿಗುತ್ತದೆ. ಅರ್ಜಿಯನ್ನು ಡೌನ್ ಲೋಡ್ ಮಾಡಿ, ಭರ್ತಿ ಮಾಡಿ ಆಫ್ ಲೈನ್ ಮೂಲಕ ಕಳುಹಿಸಬಹುದು. ಆಯೋಗದ ಸಹಾಯಕ ಕಾರ್ಯದರ್ಶಿ(ಪ್ರ), ನೇಮಕಾತಿ ಶಾಖೆ -2, ಕರ್ನಾಟಕ ಲೋಕ ಸೇವಾ ಆಯೋಗ, ಬೆಂಗಳೂರು-01 ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬಹುದು.
ಇ-ಮೇಲ್ ಮೂಲಕವೂ ಕಳುಹಿಸಿ
ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು [email protected] ಮೇಲ್ ಐಡಿಗೂ ಅರ್ಜಿಯನ್ನು ಕಳುಹಿಸಲಬಹುದಾಗಿದೆ. ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಮೂಲ ಪ್ರತಿಯನ್ನು ಆಯೋಗಕ್ಕೆ ರವಾನಿಸಬೇಕು. ಹೆಚ್ಚನ ಮಾಹಿತಿಗೆ 080-30574952ಗೆ ಕರೆ ಮಾಡಬಹುದು.