ಬೆಂಗಳೂರು: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (NTET 2025) ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಆರಂಭಿಸಿದೆ. ಜೂನ್ 4ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಜೂನ್ 23ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು exam.nta.ac.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿಯಲ್ಲಿ ಶಿಕ್ಷಕರಾಗಲು ಸ್ನಾತಕೋತ್ತರ ಪದವೀಧರರು ಅರ್ಹತೆ ಪಡೆಯಲು ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯನ್ನು ಜುಲೈ 17 ರಂದು ನಡೆಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕ ಅಥವಾ ಅದಕ್ಕೂ ಮೊದಲು ನೋಂದಾಯಿಸಿಕೊಳ್ಳಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 4 ಸಾವಿರ ರೂ. ಅರ್ಜಿ ಶುಲ್ಕ ಪಾವತಿಸಬೇಕು. ಒಬಿಸಿ ವರ್ಗದವರಿಗೆ 3,500 ರೂಪಾಯಿ ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿಯವರಿಗೆ 300 ರೂಪಾಯಿ ಅರ್ಜಿ ಶುಲ್ಕವಿದೆ.
ಅರ್ಹತಾ ಮಾನದಂಡಗಳೇನು?
ಪರೀಕ್ಷೆ ಬರೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಯುರ್ವೇದ, ಸಿದ್ಧ, ಯುನಾನಿ ಅಥವಾ ಹೋಮಿಯೋಪತಿಯಂತಹ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸ್ವೀಕಾರಾರ್ಹ ಸಂಯೋಜನೆಗಳಲ್ಲಿ ಆಯುರ್ವೇದದಲ್ಲಿ BAMS ಜತೆಗೆ MD/MS, ಹೋಮಿಯೋಪತಿಯಲ್ಲಿ MD ಜತೆಗೆ BHMS ಮತ್ತು ಯುನಾನಿಯಲ್ಲಿ MD ಜತೆಗೆ BUMS ಸೇರಿವೆ. ಇದಲ್ಲದೆ, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಜೀವ ರಾಸಾಯನಶಾಸ್ತ್ರ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ಸೈಟ್ ಆಗಿರುವ exam.nta.ac.in ಗೆ ಭೇಟಿ ನೀಡಬೇಕು.
- ಮುಖಪುಟದಲ್ಲಿ ಕಾಣಿಸುವ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
- ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬೇಕು.