ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್ ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ.
ಹೈಕೋರ್ಟ್ ನಲ್ಲಿ (High Court) ಗುರುವಾರ (ಆ.29) ವಿಚಾರಣೆ ನಡೆದಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಾದ- ವಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಆ.31 ಶನಿವಾರ ಬೆಳಗ್ಗೆ 11:30ಕ್ಕೆ ಮುಂದೂಡಿದರು.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು.
ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ಆದರೆ, ಗೈರಾಗಿದ್ದರು. ಸಿಎಂ ಪರ ವಾದ ಮಂಡಿಸಿದ ಅಭಿಷೇಕ್ ಸಿಂಘ್ವಿ, ರಾಜ್ಯಪಾಲರು ದೂರುದಾರನಿಗೆ ದಂಡ ಹಾಕಬೇಕು. ದೂರುದಾರ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವ ಮೊದಲೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಲೋಕಾಯುಕ್ತ ಪೊಲೀಸರಿಗೂ ದೂರು ನೀಡಿದ್ದಾರೆ. ಸಮಯ ವ್ಯರ್ಥ ಮಾಡಿರುವ ದೂರದಾರನಿಗೆ ಮೊದಲು ದಂಡ ಹಾಕಬೇಕಾಗಿತ್ತು. ನಾನು ಲೋಕಾಯುಕ್ತ ಹಾಗೂ ರಾಜ್ಯಪಾಲರನ್ನು ದೋಷಣೆ ಮಾಡಲ್ಲ. ಅರ್ಜಿ ರಾಜ್ಯಪಾಲರ ಬಳಿ ಇರಬೇಕಾದರೆ ಕೆಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರಿಗೆ ದಂಡ ಹಾಕುವ ಅಧಿಕಾರ ಇಲ್ಲ. ಹೀಗಾಗಿ ನ್ಯಾಯಾಲಯ ದಂಡ ಹಾಕಬೇಕು ಎಂದು ವಾದಿಸಿದ್ದಾರೆ.
ರಾಜ್ಯಪಾಲರು ದೂರುದಾರರನ್ನು ಪರಿಶೀಲನೆ ಮಾಡಬೇಕು. ಸೀರಿಯಸ್ ನೆಸ್ ಇಲ್ಲದಿದ್ದರೆ ದಾರಿಹೋಕರು ಕೂಡ ಅರ್ಜಿ ಸಲ್ಲಿಸುತ್ತಾರೆ. ರಾಜ್ಯಪಾಲರು ಸೀರಿಯಸ್ ಆಗಿ ಇರಬೇಕೆಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮಾತಿನ ಚಾಟಿ ಬೀಸಿದರು.
ಆಗ ದೂರುದಾರರ ಪರ ವಕೀಲ ಅಬ್ರಹಾಂ ಮಧ್ಯೆ ಪ್ರವೇಶಿಸಿ, ಪ್ರಾಸಿಕ್ಯೂಷನ್ ಗೂ ಮೊದಲು ಅರ್ಜಿ ಹಾಕಿದ್ದು ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಅಭಿಷೇಕ್ ಸಿಂಘ್ವಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ (Prosecution) ಅರ್ಜಿ ಸಲ್ಲಿಸಿದ್ದು ಒಬ್ಬರು, ಆದರೆ ಮೂವರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದರು.
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ರಾಜ್ಯಪಾಲರು ಅರ್ಜಿ ಪರಿಶೀಲಿಸಿಲ್ಲ. ಶೋಕಾಸ್ ಮಾಡಿಲ್ಲ ಇದು ರಾಜ್ಯಪಾಲರಿಗೆ ಅಪ್ಲಿಕೇಷನ್ ಆಫ್ ಮೈಂಡ್ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಚಾಟಿ ಬೀಸಿದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ವಿಚಾರಣೆ ಹಿನ್ನೆಲೆಯಲ್ಲಿ ಸಲೀಂ ಅಹಮದ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಕೋರ್ಟ್ ಹಾಲ್‌ಗೆ ಅರ್ಧ ಗಂಟೆ ಮೊದಲೆ ಬಂದು ಕುಳಿತಿದ್ದರು. ಅರ್ಜಿದಾರ ಸ್ನೇಹಮಯಿಕೃಷ್ಣ ಹಾಗೂ ಅರ್ಜಿದಾರರ ಪರ ಲಕ್ಷ್ಮಿಅಯ್ಯಂಗಾರ್, ಪ್ರಭುಲಿಂಗ ನಾವದಗಿ, ರಂಗನಾಥ್ ರೆಡ್ಡಿ ಹಾಜರಿದ್ದರು. ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಇದ್ದರು. ಕೋರ್ಟ್ ಕಲಾಪವನ್ನು ಸಿಎಂ ಸಿದ್ದರಾಮಯ್ಯ ಯೂಟ್ಯೂಬ್ ಮೂಲಕ ವೀಕ್ಷಿಸಿದ್ದಾರೆ.