ನವದೆಹಲಿ : ತಂತ್ರಜ್ಞಾನ ಲೋಕದ ದೈತ್ಯ ಆಪಲ್ (Apple), 2026ರ ಸಾಲಿನ ತನ್ನ ಮೊದಲ ಬೃಹತ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಿದೆ. ಮಾರ್ಚ್ 4ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಪಲ್, ಹಲವು ಹೊಸ ಮತ್ತು ಸುಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಅಮೆರಿಕದ ತನ್ನ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆಸುವ ಆಪಲ್, ಈ ಬಾರಿ ನ್ಯೂಯಾರ್ಕ್, ಲಂಡನ್ ಮತ್ತು ಶಾಂಘೈ ಸೇರಿದಂತೆ ಮೂರು ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಈ ಇವೆಂಟ್ ಆಯೋಜಿಸುವ ಮೂಲಕ ಜಾಗತಿಕವಾಗಿ ಕುತೂಹಲ ಮೂಡಿಸಿದೆ.
ಕಡಿಮೆ ಬೆಲೆಯ ಮ್ಯಾಕ್‌ಬುಕ್: ಮಧ್ಯಮ ವರ್ಗದವರ ಕನಸು ನನಸು?
ಈ ಬಾರಿಯ ಕಾರ್ಯಕ್ರಮದ ಅತಿ ದೊಡ್ಡ ಮತ್ತು ಪ್ರಮುಖ ಆಕರ್ಷಣೆ ಎಂದರೆ ಅದು ‘ಕಡಿಮೆ ಬೆಲೆಯ ಮ್ಯಾಕ್‌ಬುಕ್’ (Affordable MacBook). ಮಾರುಕಟ್ಟೆಯಲ್ಲಿ ಆಪಲ್ ಉತ್ಪನ್ನಗಳ ಬೆಲೆ ದುಬಾರಿ ಎಂಬ ಭಾವನೆ ಹೋಗಲಾಡಿಸಿ, ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಪಲ್ ಈ ಹೊಸ ಯೋಜನೆಯನ್ನು ರೂಪಿಸಿದೆ ಎಂದು ವರದಿಯಾಗಿದೆ. ಈ ಹೊಸ ಮ್ಯಾಕ್‌ಬುಕ್ ಬೆಲೆ ಅಂದಾಜು 599 ಡಾಲರ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 54,000 ರೂ. ಇರುವ ಸಾಧ್ಯತೆಯಿದೆ. ಇದು 12.9 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿರಲಿದ್ದು, ಯುವಜನತೆಯನ್ನು ಆಕರ್ಷಿಸಲು ತಿಳಿ ಹಸಿರು, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ವಿಶೇಷವೆಂದರೆ, ಐಫೋನ್ 16 ಪ್ರೊನಲ್ಲಿ ಬಳಸಲಾದ ಶಕ್ತಿಶಾಲಿ A18 ಪ್ರೊ ಚಿಪ್‌ಸೆಟ್ ಇದರಲ್ಲಿರಲಿದ್ದು, ಬೆಲೆ ಕಡಿಮೆಯಾದರೂ ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಇರುವುದಿಲ್ಲ ಎನ್ನಲಾಗಿದೆ.
ಐಫೋನ್ 17e: ಏನಿದರ ವಿಶೇಷತೆ?
ಸ್ಮಾರ್ಟ್‌ಫೋನ್ ಪ್ರಿಯರಿಗಾಗಿ ಆಪಲ್ ತನ್ನ ಬಜೆಟ್ ಸ್ನೇಹಿ ‘e’ ಸರಣಿಯಲ್ಲಿ ಹೊಸದಾಗಿ ‘ಐಫೋನ್ 17e’ (iPhone 17e) ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ಹಿಂದಿನ ಆವೃತ್ತಿಗಿಂತ ತೆಳುವಾದ ಬೆಜೆಲ್ (Slimmer Bezels) ಮತ್ತು ವೇಗದ ಚಾರ್ಜಿಂಗ್‌ಗೆ ಮ್ಯಾಗ್‌ಸೇಫ್ (MagSafe) ಬೆಂಬಲವನ್ನು ಹೊಂದಿರಲಿದೆ. ಇದರಲ್ಲಿ ಹೊಸ A19 ಚಿಪ್‌ಸೆಟ್ ಅಳವಡಿಸಲಾಗಿದ್ದರೂ, ವೆಚ್ಚ ತಗ್ಗಿಸುವ ಉದ್ದೇಶದಿಂದ ಕ್ಯಾಮೆರಾ ವಿನ್ಯಾಸ ಮತ್ತು ಡಿಸ್ಪ್ಲೇ ನಾಚ್ (Notch) ಹಳೆಯ ಮಾದರಿಯಲ್ಲೇ ಮುಂದುವರಿಯುವ ಸಾಧ್ಯತೆಯಿದೆ.
ಐಪ್ಯಾಡ್ ಸರಣಿಗೆ ಬಲ ತುಂಬಲಿರುವ M4 ಚಿಪ್
ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಆಪಲ್ ಐಪ್ಯಾಡ್‌ಗಳನ್ನು ಅಪ್‌ಗ್ರೇಡ್ ಮಾಡುತ್ತಿದೆ. ಹೊಸ ಐಪ್ಯಾಡ್ ಏರ್ (iPad Air) ಶಕ್ತಿಶಾಲಿ M4 ಚಿಪ್‌ಸೆಟ್ ಪಡೆಯುವ ನಿರೀಕ್ಷೆಯಿದ್ದು, ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಇಲ್ಲದಿದ್ದರೂ ವೇಗ ಹೆಚ್ಚಲಿದೆ. ಇದರೊಂದಿಗೆ 12ನೇ ತಲೆಮಾರಿನ ಎಂಟ್ರಿ ಲೆವೆಲ್ ಐಪ್ಯಾಡ್ ಕೂಡ A18 ಚಿಪ್‌ಸೆಟ್‌ನೊಂದಿಗೆ ಹೊಸ ರೂಪದಲ್ಲಿ ಬರುವ ಸಾಧ್ಯತೆಯಿದೆ. ಅಲ್ಲದೆ M5 ಪ್ರೊ ಮತ್ತು M5 ಮ್ಯಾಕ್ಸ್ ಚಿಪ್‌ಸೆಟ್‌ಗಳೊಂದಿಗೆ ಹೊಸ ಮ್ಯಾಕ್‌ಬುಕ್ ಪ್ರೊ ಕೂಡ ಅನಾವರಣಗೊಳ್ಳಬಹುದು.
ಸಿರಿ (Siri) ಮತ್ತು ಎಐ (AI) ಕ್ರಾಂತಿ
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ನಡೆಯುತ್ತಿರುವ ಪೈಪೋಟಿಯನ್ನು ಎದುರಿಸಲು ಆಪಲ್ ತನ್ನ ವರ್ಚುವಲ್ ಅಸಿಸ್ಟೆಂಟ್ ‘ಸಿರಿ’ಯನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಮುಂದಾಗಿದೆ. ಗೂಗಲ್ ಜೆಮಿನಿ (Gemini) ಜೊತೆಗಿನ ಒಪ್ಪಂದದ ಭಾಗವಾಗಿ, iOS 26.4 ಆವೃತ್ತಿಯೊಂದಿಗೆ ಹೊಸ ಸಿರಿಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು ಬಳಕೆದಾರರಿಗೆ ಹೆಚ್ಚು ನಿಖರ ಮತ್ತು ವೇಗದ ಸೇವೆ ನೀಡಲಿದೆ. ಆಪಲ್‌ನ ಈ ವಿಶೇಷ ಕಾರ್ಯಕ್ರಮವು ಮಾರ್ಚ್ 4, 2026ರಂದು ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7:30ಕ್ಕೆ (9 am ET) ಆರಂಭವಾಗಲಿದೆ. ಆಸಕ್ತರು ಆಪಲ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : ರಸ್ತೆ ದಾಟುವಾಗ ಬೈಕ್ ಡಿಕ್ಕಿ | ಗೆಳತಿಯ ಜೊತೆ ಊಟಕ್ಕೆ ತೆರಳುತ್ತಿದ್ದ ಯುವತಿ ದಾರುಣ ಸಾ*ವು



















