ಕನ್ನಡದ ಹಿರಿಯ ನಿರೂಪಕಿ ಅಪರ್ಣಾ (Aparna) ಕ್ಯಾನ್ಸರ್ ನಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಪತ್ನಿಯ ಅಂತಿಮ ದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ಆಪ್ತರಿಗೆ ಹೂವು-ಹಾರ ತರಬೇಡಿ ಎಂದು ಪತಿ ನಾಗರಾಜ್ ವಸ್ತಾರೆ ಮನವಿ ಮಾಡಿದ್ದಾರೆ.
ಅಪರ್ಣಾ ಅವರ ವಿಡಿಯೋ ಮತ್ತು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪತಿ ನಾಗರಾಜ್ ವಸ್ತಾರೆ, ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಹತ್ತಿರ ಇರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ತಾರಾ, ಶ್ರೀನಾಥ್, ಪದ್ಮಜಾ ರಾವ್, ದತ್ತಣ್ಣ, ಗಿರಿಜಾ ಲೋಕೇಶ್, ಮಂಡ್ಯ ರಮೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ.