ಬೆಂಗಳೂರು-ಕನ್ನಡ ನಿರೂಪಣಾಲೋಕದ ರಾಣಿ, ಮಾತಿನಮಲ್ಲಿ ಅನುಶ್ರೀ ಸಿಂಗಲ್ ಲೈಫ್ ಗೆ ಗುಡ್ ಬಾಯ್ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಏಕಾಂತ ಜೀವನ ಸಾಕು, ನಾನುನೀನು ಮತ್ತು ನಮ್ಮ ಪ್ರೇಮ ಪಯಣ’ ಅಂತ ಮಧುರ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ.

ನಿರೂಪಕಿ ಅನುಶ್ರೀ ಹಾಗೂ ರೋಷನ್ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಚಟಪಟ ಅಂತ ಮಾತನಾಡುತ್ತಾ, ಮೈಕ್ ಹಿಡಿದ್ರೆ ಸಾಕು ಯಾರದ್ದೋ ತಮಾಷೆಯಾಗಿ ಕಾಲೇಳೆಯುತ್ತ, ತಾವು ನಿರೂಪಣೆ ಮಾಡುವ ಕಾರ್ಯಕ್ರಮಗಳಿಗೆ ಜೀವ ತುಂಬೋ ಅನುಶ್ರೀ, ಈಗ ಮದುವೆಯ ಈ ಬಂಧ, ಅನುರಾಗದ ಅನುಬಂಧ ಅಂತ ಹಾಡ್ತಿದಾರೆ..!

ಬೆಂಗಳೂರಿನ ಹೊರವಲಯದ ತಿಟ್ಟಹಳ್ಳಿ ಕಗ್ಗಲಿಪುರದಲ್ಲಿ ಅನುಶ್ರೀ ಮದುವೆ ನೆರವೇರಿದೆ. ಬೆಳಗ್ಗೆ ಸರಿಯಾಗಿ 10:56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ರು. ಕೆಂಪು ಮಿಶ್ರಿತ ಶೈನಿಂಗ್ ಸೀರೆಯಲ್ಲಿ ಅನುಶ್ರೀ ಕಂಗೊಳಿಸಿದ್ದಾರೆ. ಮದುವೆ ಗಂಡು ರೋಷನ್ ಡಾರ್ಕ್ ಗೋಲ್ಡನ್ ಶೆರವಾನಿಯಲ್ಲಿ ಮಿಂಚಿದರು.

ಕುಟುಂಬದ ಸಮ್ಮತಿಯಂತೆ ಮದುವೆಯಾದ ಈ ಜೋಡಿಹಕ್ಕಿಗೆ ಶುಭ ಹಾರೈಸಲು ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ತರುಣ್ ಸುಧೀರ್, ನಾಗಭೂಷಣ್, ಲವ್ಲಿಸ್ಟಾರ್ ಪ್ರೇಮ್, ರಾಜ್.ಬಿ. ಶೆಟ್ಟಿ, ಶರಣ್, ಸೋನೆಲ್ ಮೊಂಥೆರೋ, ಕಾವ್ಯಷಾ, ಚೈತ್ರ ಆಚಾರ್ ಸೇರಿದಂತೆ ಹಲವು ಸ್ಟಾರ್ ಸೆಲೆಬ್ರಿಟಿಗಳ ದಂಡೇ ಆಗಮಿಸಿತು.

ಅನುಶ್ರೀ ಅಪ್ಪಟ ಪವರ್ ಸ್ಟಾರ್ ಅಭಿಮಾನಿ. ಮದುವೆ ಮಂಟಪದಲ್ಲೂ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅಪ್ಪು ಫ್ಯಾನ್ಸ್ ಈ ಸಡಗರದಲ್ಲೇ ಪುನೀತ್ ನೆನಪಿಗೆ ಜಾರಿದ್ರು. ಅನುಶ್ರೀ ನಿರೂಪಣೆಯ ಕ್ಷೇತ್ರದಲ್ಲಿ ತಮ್ಮದೇ ಫ್ಯಾನ್ ಫಾಲೋವಿಂಗ್ ಸಂಪಾದಿಸಿದ್ದಾರೆ. ಅಂತೂ ಪರ್ಸನಲ್ ಲೈಫ್ ಬಗ್ಗೆ ಹೆಚ್ಚೇನೂ ಎಲ್ಲಿಯೂ ಹಂಚಿಕೊಳ್ಳದ ಅನುಶ್ರೀ, ಹೀಗೆ ಧಾಮ್ ಧೂಮ್ ಅಂತ ಮದುವೆಯಾಗಿರೋದು ಸಂತೋಷವೇ. ಹೀಗೆ ನೂರು ಕಾಲ ಈ ಪ್ರಣಯಹಕ್ಕಿಗಳು ನಗುನಗುತಾ ಸುಖವಾಗಿರಲಿ ಎಂಬುದೇ ಫ್ಯಾನ್ಸ್ ಹಾರೈಕೆ..!