ಬೆಂಗಳೂರು: ಜೀವನದಲ್ಲಿ ನಾವೂ ಕೋಟ್ಯಂತರ ರೂಪಾಯಿ ಸಂಪಾದಿಸಬೇಕು, ನಗಾಡಿದವರ ಮುಂದೆ ಗರ್ವದಿಂದ ತಿರುಗಾಡಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ, ಪ್ರತಿಯೊಬ್ಬರಿಗೂ ಹೆಚ್ಚಿನ ದುಡ್ಡು ಸಂಪಾದಿಸಲು ಆಗುವುದಿಲ್ಲ. ಆದರೆ, ಶಾದಿ.ಕಾಂ ಕಂಪನಿಯ ಸಂಸ್ಥಾಪಕರಾಗಿರುವ ಅನುಪಮ್ ಮಿತ್ತಲ್ (Anupam Mittal) ಅವರ ಪ್ರಕಾ ಗರ, ಯಾರು ಬೇಕಾದರೂ ಕೋಟ್ಯಧೀಶರಾಗಬಹುದಂತೆ. ಕೆಲ ಸೂತ್ರಗಳನ್ನು ಪಾಲಿಸಿದರೆ ಸಾಕು, ಪ್ರತಿಯೊಬ್ಬರೂ ಕೋಟ್ಯಧೀಶರಾಗಬಹುದು ಎಂದು ಅವರು ತಿಳಿಸಿದ್ದಾರೆ.
ಸ್ಮಾರ್ಟ್ ಆಗಿ ಹೂಡಿಕೆ ಮಾಡುವುದರಿಂದ ಯಾರು ಬೇಕಾದರೂ ಬಿಲಿಯನೇರ್ ಆಗಬಹುದು. ಒಬ್ಬ ವ್ಯಕ್ತಿಯು ಇವತ್ತಿನಿಂದ 20 ವರ್ಷಗಳವರೆಗೆ ನಿಯಮಿತವಾಗಿ, ನಿರಂತರವಾಗಿ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಅವರು ಕೋಟ್ಯಧೀಶರಾಗಬಹುದು. ಆರಂಭದಲ್ಲಿಯೇ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ರಿಸ್ಕ್ ತೆಗೆದುಕೊಳ್ಳಬಾರದು. ಎಸ್ಐಪಿ ಮೂಲಕವೇ ಬಿಲಿಯನೇರ್ ಆಗಬಹುದು ಎಂದು ಅನುಪಮ್ ಮಿತ್ತಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಚಿನ್ನ, ಮನೆ ಖರೀದಿ ಬೆಸ್ಟ್”
ನಮ್ಮ ಪೂರ್ವಜರು ಹೂಡಿಕೆ ಕುರಿತು ಹೊಂದಿದ್ದ ಮನೋಭಾವ, ಅವರ ತೀರ್ಮಾನಗಳು ಸರಿಯಾಗಿದ್ದವು. ಅವರು ಚಿನ್ನವನ್ನು ಖರೀದಿಸುವ ಮೂಲಕ ಸ್ಮಾರ್ಟ್ ಹೂಡಿಕೆದಾರರಾಗಿದ್ದರು ಎಂದು ಮಿತ್ತಲ್ ತಿಳಿಸಿದ್ದಾರೆ. “ನನ್ನ ಹೆಂಡತಿಗೆ ಆಕೆಯ ತಂದೆಯು ಚಿನ್ನ ಖರೀದಿಸು ಎಂದು ಹೇಳಿದ್ದರು. ಅದಕ್ಕೆ ನಾನು ಅಡ್ಡಬಾಯಿ ಹಾಕಿದ್ದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ರಿಟರ್ನ್ಸ್ ಬರೋದಿಲ್ಲ ಎಂದಿದ್ದೆ. ಆದರೆ, ನನ್ನ ಅಂದಾಜು ಸುಳ್ಳಾಗಿತ್ತು. ಚಿನ್ನವೀಗ ನಾಲ್ಕು ಪಟ್ಟು ರಿಟರ್ನ್ಸ್ ಕೊಟ್ಟಿದೆ. ಹಾಗಾಗಿ ಚಿನ್ನ ಖರೀದಿಸುವುದು ಉತ್ತಮ ನಿರ್ಧಾರ” ಎಂದು ಅನುಪಮ್ ಮಿತ್ತಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಮನೆ ಖರೀದಿ ಒಳ್ಳೆಯದು”
ಮನೆ ಕಟ್ಟುವುದಕ್ಕಿಂತ, ಅಪಾರ್ಟ್ ಮೆಂಟ್ ಖರೀದಿ ಮಾಡುವುದಕ್ಕಿಂತ ಬಾಡಿಗೆ ಮನೆಯಲ್ಲಿದ್ದರೆ ಹೆಚ್ಚಿನ ಹಣ ಕೈಯಲ್ಲಿರುತ್ತದೆ. ಸಾಲ ಮಾಡಿ ಮನೆ ಖರೀದಿಸುವುದು ಒಳ್ಳೆಯದಲ್ಲ ಅಂತ ತುಂಬ ಜನ ಹೇಳುತ್ತಾರೆ. ಆದರೆ, ನಮ್ಮ ಹಿರಿಯರು ತಲೆಗೊಂದು ಸೂರು ಕಟ್ಟಿಸುತ್ತಿದ್ದರು. ಹಾಗಾಗಿ, ನಾವು ಕೂಡ ಸ್ವಂತ ಮನೆ ಹೊಂದುವುದು ತುಂಬ ಮುಖ್ಯ. ಸ್ವಂತ ಮನೆ ಇದ್ದವರು ಯಾವುದೇ ದೊಡ್ಡ ರಿಸ್ಕ್ ಗೆ ಬೇಕಾದರೂ ಕೈ ಹಾಕಬಹುದು ಎಂದು ಮಿತ್ತಲ್ ಹೇಳಿದ್ದಾರೆ.