ಮುಂಬಯಿ: ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಐಪಿಎಲ್ 2026ರ ಎರಡನೇ ಪಂದ್ಯದಲ್ಲಿ ಪ್ರೇಕ್ಷಕರು ರೋಮಾಂಚಕ ಕ್ಷಣಕ್ಕೆ ಸಾಕ್ಷಿಯಾದರು. ಕೆಕೆಆರ್ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಮುಂಬೈ ಇಂಡಿಯನ್ಸ್‌ಗೆ ಮಾಜಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದ್ದರು. ಆದರೆ, ಕೆಕೆಆರ್ ಆಲ್‌ರೌಂಡರ್ ಅನುಕೂಲ್ ರಾಯ್ ಹಿಡಿದ ನಂಬಲಸಾಧ್ಯವಾದ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು.
ವೈಭವ್ ಅರೋರಾ ಎಸೆದ ಇನ್ನಿಂಗ್ಸ್‌ನ 11.5ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಚೆಂಡನ್ನು ಲಾಂಗ್-ಆನ್ ಕಡೆಗೆ ಸಿಡಿಸಲು ಯತ್ನಿಸಿದರು. ಈ ವೇಳೆ ಹಿಂದಕ್ಕೆ ಓಡಿದ ಅನುಕೂಲ್ ರಾಯ್, ಅದ್ಭುತವಾಗಿ ಡೈವ್ ಮಾಡುವ ಮೂಲಕ ಅಸಾಧ್ಯವೆನಿಸಿದ ಕ್ಯಾಚ್ ಅನ್ನು ಹಿಡಿದು ರೋಹಿತ್ ಅವರ ಅಮೋಘ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.
ರೋಹಿತ್ ಶರ್ಮಾ ದಾಖಲೆಗಳ ಸುರಿಮಳೆ
ಗೌರವಯುತವಾಗಿ ಮೈದಾನ ತೊರೆಯುವ ಮೊದಲು ರೋಹಿತ್ ಶರ್ಮಾ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಕೇವಲ 38 ಎಸೆತಗಳನ್ನು ಎದುರಿಸಿದ ಅವರು 78 ರನ್ ಚಚ್ಚಿದರು. ಈ ಇನ್ನಿಂಗ್ಸ್ ಮೂಲಕ ರೋಹಿತ್ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದರು. ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್ ಬಾರಿಸಿದ ಮೊದಲ ಏಷ್ಯನ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಅಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಕೆಕೆಆರ್ ತಂಡದ ವಿರುದ್ಧ ಅತಿ ಹೆಚ್ಚು ರನ್ (1095 ರನ್) ಗಳಿಸಿದ ಆಟಗಾರ ಎಂಬ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ರೋಹಿತ್ ಹಿಂದಿಕ್ಕಿದರು. ಅವರು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, ಇದು ಐಪಿಎಲ್‌ನಲ್ಲಿ ಅವರ ಅತಿ ವೇಗದ ಫಿಫ್ಟಿ ಎನಿಸಿಕೊಂಡಿತು.
ಮುಂಬೈಗೆ ಆಸರೆಯಾದ ರೋಹಿತ್-ರಿಕೆಲ್ಟನ್ ಜೋಡಿ
ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಜೋಡಿ ಮೊದಲ ವಿಕೆಟ್‌ಗೆ 148 ರನ್‌ಗಳ ಭರ್ಜರಿ ಜೊತೆಯಾಟ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಇದು ಮುಂಬೈ ತಂಡದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಆರಂಭಿಕ ಜೊತೆಯಾಟವಾಗಿದೆ. ರಿಕೆಲ್ಟನ್ ಕೂಡ 80 ರನ್ ಗಳಿಸಿ ಮಿಂಚಿದರು. ಕೆಕೆಆರ್ ಪರ ಅಜಿಂಕ್ಯ ರಹಾನೆ (67), ಅಂಗ್ಕ್ರಿಶ್ ರಘುವಂಶಿ (51) ಮತ್ತು ಫಿನ್ ಅಲೆನ್ (37) ಅವರ ಬ್ಯಾಟಿಂಗ್ ನೆರವಿನಿಂದ 220 ರನ್ ಗಳಿಸಿತ್ತು. ರಹಾನೆ ಗಾಯಗೊಂಡು ಹೊರಹೋದ ಕಾರಣ ರಿಂಕು ಸಿಂಗ್ ತಂಡವನ್ನು ಮುನ್ನಡೆಸಿದರು. ರೋಹಿತ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಕೆಕೆಆರ್ ಬೌಲರ್‌ಗಳು ಹೈರಾಣಾಗಿದ್ದ ಸಂದರ್ಭದಲ್ಲಿ ಅನುಕೂಲ್ ರಾಯ್ ಅವರ ಈ ಆಕರ್ಷಕ ಕ್ಯಾಚ್ ಕೆಕೆಆರ್ ತಂಡಕ್ಕೆ ಆನೆಬಲ ನೀಡಿತು.
ಇದನ್ನೂ ಓದಿ : ಐಪಿಎಲ್ 2026 : ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ ಗಾಯ



















