ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮನೆಗೆ ನುಗ್ಗಿ ಅವರಿಗೆ ಚೂರಿ ಇರಿದ ಘಟನೆ ನಡೆದು 3 ದಿನಗಳಾದರೂ, ಮುಂಬೈ ಪೊಲೀಸರ 30ಕ್ಕೂ ಅಧಿಕ ತಂಡ ರಚನೆಯಾದರೂ ದಾಳಿಕೋರ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದರೆ, ಆತನ ಚಲನವಲನಗಳು ಮುಂಬೈನ ಹಲವೆಡೆ ಸಿಸಿಟಿವಿಗಳಲ್ಲಿ ದಾಖಲಾಗಿವೆ. ಈಗ ಇದರ ಜಾಡನ್ನು ಹಿಡಿದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಶನಿವಾರ ಆರೋಪಿಯ ಮತ್ತೊಂದು ವಿಡಿಯೋ ಬಹಿರಂಗವಾಗಿದೆ. ಘಟನೆ ನಡೆದ ಸುಮಾರು 6 ಗಂಟೆಗಳ ಬಳಿಕ ದಾದರ್‌ನ ಅಂಗಡಿಯೊಂದರಲ್ಲಿ ದಾಳಿಕೋರ ಹೆಡ್‌ಫೋನ್ ಖರೀದಿಸುತ್ತಿರುವ ದೃಶ್ಯ ಇದರಲ್ಲಿದೆ. ಈ ಮೂಲಕ ಒಟ್ಟಾರೆಯಾಗಿ ಆರೋಪಿಯ 4-5 ದೃಶ್ಯಗಳು ಹೊರಬಂದಂತಾಗಿದೆ.
ಆರೋಪಿಯು ಸೈಫ್ ಮನೆ ಮೇಲೆ ದಾಳಿ ನಡೆಸಿದಾಗಿನಿಂದ ಪದೇ ಪದೇ ಬಟ್ಟೆ ಬದಲಾಯಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ. ದಾಳಿ ನಡೆಸುವ ವೇಳೆ ಆತ ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದ ಎನ್ನುವುದು ಬಂಗಲೆಯ 6ನೇ ಮಹಡಿಯಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ. ಅದಾದ ನಂತರ ಬಾಂದ್ರಾದ ರೈಲು ನಿಲ್ದಾಣದಲ್ಲಿ ನೀಲಿ ಬಣ್ಣದ ಬಟ್ಟೆಯಲ್ಲಿ ದಾಳಿಕೋರ ನಿಂತಿರುವುದು ಕಂಡುಬಂದಿದೆ. ಬಳಿಕ ದಾದರ್ ನ ಮೊಬೈಲ್ ಅಂಗಡಿಯೊಂದರಲ್ಲಿ ಇದೇ ಬಟ್ಟೆಯಲ್ಲಿದ್ದ ದಾಳಿಕೋರ, ಅಲ್ಲಿ ಹೆಡ್ ಫೋನ್ ಖರೀದಿಸಿದ್ದಾನೆ. ಅದಲ್ಲದೇ, ಇನ್ನೊಂದು ಫೋಟೋ ಸೆರೆಯಾಗಿದ್ದು, ಅದರಲ್ಲಿ ಆತ ಹಳದಿ ಬಣ್ಣದ ಶರ್ಟ್ ಧರಿಸಿದ್ದಾನೆ. ಈ ಎಲ್ಲ ಫೋಟೋ, ವಿಡಿಯೋಗಳನ್ನು ಆಧರಿಸಿ ಪೊಲೀಸರು ಆತನ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ.

ಶುಕ್ರವಾರ ಬೆಳಗ್ಗೆ ದಾಳಿಕೋರನಿಗೆ ಹೋಲುವ ಮತ್ತೊಬ್ಬ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಕಾಲ ವಿಚಾರಣೆ ನಡೆಸಿದ್ದರು. ಆದರೆ, ಆತನಿಗೆ ಘಟನೆಗೂ ಸಂಬಂಧ ಇಲ್ಲದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಆತನನ್ನು ಬಿಡುಗಡೆ ಮಾಡಲಾಗಿತ್ತು. ನಿಜವಾದ ಆರೋಪಿ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರೇ ತಿಳಿಸಿದ್ದರು.
ಇನ್ನೊಂದೆಡೆ, ದಾಳಿಕೋರನ ಕುರಿತು ಪೊಲೀಸರಿಗೆ ಸಾಕಷ್ಟು ಸುಳಿವುಗಳು ಸಿಕ್ಕಿದ್ದು, ಸದ್ಯದಲ್ಲೇ ಆತನ ಬಂಧನವಾಗಲಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಪೊಲೀಸರ 30 ತಂಡಗಳು ಕಾರ್ಯನಿರತವಾಗಿದ್ದು, ಘಟನೆ ನಡೆದ ದಿನ ಹಾಗೂ ಮಾರನೇ ದಿನ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೊಲೀಸ್ ರೆಕಾರ್ಡ್ ನಲ್ಲಿರುವ ಕಳ್ಳರು, ಕ್ರಿಮಿನಲ್ ಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ. ಶುಕ್ರವಾರ ಒಂದೇ ದಿನ ಸುಮಾರು 15 ಮಂದಿಯನ್ನು ಕರೆಸಿಕೊಂಡು, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.