ಮಂಡ್ಯ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳದ ವಿರುದ್ಧ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದರೂ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಲೇ ಇವೆ. ಹೀಗೆ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ (59) ಸಾವನ್ನಪ್ಪಿರುವ ಮಹಿಳೆ. ಉಜ್ಜೀವನ್ ಬ್ಯಾಂಕ್ ನಿಂದ (Ujjivan Small Finance Bank) ಪ್ರೇಮ 6 ಲಕ್ಷ ರೂ. ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ಈಗಾಗಲೇ 6 ಲಕ್ಷ ರೂ. ಹಣ ಕಟ್ಟಿದ್ದರು. ಆದರು ಇನ್ನೂ 6 ಲಕ್ಷ ರೂ. ಹಣ ಕಟ್ಟಬೇಕೆಂದು ಪೀಡಿಸುತ್ತಿದ್ದ ಉಜ್ಜೀವನ್ ಸಿಬ್ಬಂದಿ, ಪ್ರೇಮಾ ಮನೆ ಸೀಜ್ ಮಾಡಿದ್ದರು. ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.
ಕೂಡಲೇ ಪ್ರೇಮಾ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.