ಮೈಸೂರು: ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಗಳ ಹಾವಳಿ ಮಿತಿ ಮೀರುತ್ತಿದೆ. ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ಮುಂದಾದರೂ ಮೈಕ್ರೋ ಫೈನಾನ್ಸ್ ಕಿರುಕುಳ ಬೆಳಕಿಗೆ ಬರುತ್ತಲೇ ಇವೆ. ಈಗ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಕಾಟಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನಂಜನಗೂಡು (Nanjangud) ತಾಲೂಕಿನ ಅಂಬಳೆ ಗ್ರಾಮದಲ್ಲಿ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಕಾಟಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶೀಲಾ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಐಐಎಫ್‌ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ (Micro Finance) ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗೆಂದು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ಇದಕ್ಕಾಗಿ ಅವರು ಪ್ರತಿ ತಿಂಗಳು 20 ಸಾವಿರಕ್ಕೂ ಅಧಿಕ ಹಣ ಕಟ್ಟುತ್ತಿದ್ದರು. ಆದರೆ, ಸಾಲಕ್ಕೆ ತೆಗೆದುಕೊಂಡಿದ್ದ ಹಸು ಕೂಡ ಅನಾರೋಗ್ಯದಿಂದಾಗಿ ಇತ್ತೀಚೆಗೆ ಸಾವನ್ನಪ್ಪಿತ್ತು. ಹೈನುಗಾರಿಕೆಯೇ ಇವರ ಜೀವನಕ್ಕೆ ಆಸರೆಯಾಗಿತ್ತು. ಆದರೆ, ಹಸು ಸಾವನ್ನಪ್ಪಿದ್ದರಿಂದಾಗಿ ಜೀವನ ಕಷ್ಟವಾಗಿತ್ತು.
ಇನ್ನೊಂದೆಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟುವಂತೆ ಮನೆಯ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.