ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಸರಣಿ ಮುಂದುವರೆದಿದ್ದು, ಹಠಾತ್ ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಹೃದಯಾಘಾತಕ್ಕೆ ಗ್ರಾಪಂ ಮಾಜಿ ಸದಸ್ಯ ಆನಂದ (44) ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕೊಂಗಲಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನಂದ್, ಐಚನಹಳ್ಳಿ ಗ್ರಾಪಂನ ಮಾಜಿ ಸದಸ್ಯ. ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಬೆಳಗಿನ ಜಾವ 4ಗಂಟೆ ವೇಳೆಗೆ ಎದೆನೋವು ಕಾಣಿಸಿಕೊಂಡಿದೆ. ಆಗ ಪತ್ನಿ ಬಳಿ ವಿಷಯ ಹೇಳಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಆಟೋ ಕರೆತರುವಷ್ಟರಲ್ಲಿ ಆನಂದ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೊಳೆನರಸೀಪುರ ಆಸ್ಪತ್ರೆಗೆ ಕರೆದುಕೊಂಡು ಆನಂದ್ ಕುಟುಂಬಸ್ಥರು ಬಂದಿದ್ದಾರೆ. ಆದರೆ, ವೈದ್ಯರು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಹಾಸನದಲ್ಲಿ ಹೃದಯಾಘಾತಕ್ಕೆ 37 ಜನ ಬಲಿಯಾಗುವಂತಾಗಿದ್ದು, ಜನ ಆತಂಕ ಪಡುತ್ತಿದ್ದಾರೆ.