ಬೆಂಗಳೂರು: ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಮಹಿಳೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಮಯ್ಯ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವಿಜಯ ಕುಮಾರಿ(Vijaya Kumari) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ನೇಣು ಬಿಗಿದುಕೊಂಡ ವಿಜಯ ಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆದರೆ, ಮಹಿಳೆಯ ಕುಟುಂಬಸ್ಥರು ಮಾತ್ರ ಇದು ಆತ್ಮಹತ್ಯೆಯಲ್ಲ, ಕೊಲೆ(murder) ಎಂದು ಆರೋಪಿಸಿದ್ದಾರೆ. ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಡ ನಾಗರಾಜ್ ಪ್ರತಿದಿನ ವರದಕ್ಷಿಣೆ ಕಿರುಕುಳ (Dowry harassment) ನೀಡುತ್ತಿದ್ದ ಎಂದು ಮಗಳು ಹೇಳುತ್ತಿದ್ದಳು ಎಂದು ಆರೋಪಿಸಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.