ಬೆಂಗಳೂರು: ಪ್ರೇಯಸಿ ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿಶೀಟರ್, ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಂಕಿ ಹಚ್ಚುವ ಮುನ್ನ ಯುವತಿ ಮನೆಗೆ ತೆರಳಿ ತಂದೆಗೆ ಚಾಕು ಇರಿದಿದ್ದಾನೆ ಎನ್ನಲಾಗಿದೆ.
ಈ ಘಟನೆ ಬೆಂಗಳೂರಿನ (Bengaluru) ಸುಬ್ರಮಣ್ಯಪುರದಲ್ಲಿ ನಡೆದಿದೆ. ರೌಡಿಶೀಟರ್ ರಾಹುಲ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತನ ಮೇಲೆ ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್‌ಗಳಿವೆ. ಕಳೆದ ಕೆಲವು ತಿಂಗಳುಗಳಿಂದ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಿದ್ದಳು. ಹೀಗಾಗಿ ಭಾನುವಾರ ಸ್ನೇಹಿತರ ಜೊತೆ ಪ್ರೇಯಸಿಯ ಮನೆಗೆ ತೆರಳಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ.
ಪ್ರೇಯಸಿಯನ್ನು ಹುಡುಕಿಕೊಂಡ ಸಿಕೆ ಅಚ್ಚುಕಟ್ಟು ಮನೆಗೆ ಬಂದಿದ್ದ ವೇಳೆ ಗಲಾಟೆ ಮಾಡಿದ್ದಾನೆ. ಇದಕ್ಕೆ ಯುವತಿಯ ಸಾಕು ತಂದೆ ಲಕ್ಷ್ಮೀನಾರಾಯಣ ವಿರೋಧಿಸಿದ್ದಕ್ಕೆ ರೊಚ್ಚಿಗೆದ್ದ ರಾಹುಲ್ ಅವರಿಗೆ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಆನಂತರ ಯುವತಿ ಇಲ್ಲದಿರುವುದನ್ನು ತಿಳಿದು ಸುಬ್ರಮಣ್ಯಪುರದ ಚಿಕ್ಕಲಸಂದ್ರ ಅಪಾರ್ಟ್ಮೆಂಟ್ ಗೆ ತೆರಳಿದ್ದಾನೆ. ಅಲ್ಲಿ ಅಪಾರ್ಟ್ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಕಾರು ಗ್ಲಾಸ್ ಒಡೆದು ಪೆಟ್ರೋಲ್ ಹಾಕಿ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಪಕ್ಕದ ಕಾರಿಗೆ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.
ಈಗ ಆರೋಪಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ವಿರೇಶ್ ಎಂಬುವವರಿಂದ ಕಾರಿಗೆ ಹಾನಿ ಮಾಡಿದ್ದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೌಡಿಶೀಟರ್ ರಾಹುಲ್ ತನ್ನ ಪ್ರೀತಿಯ ನೆನಪಿಗಾಗಿ ಯುವತಿಗೆ ಕೆಲವು ವರ್ಷಗಳ ಹಿಂದೆ ಕಾರು ಕೊಡಿಸಿದ್ದ ಎಂದು ತಿಳಿದು ಬಂದಿದೆ. ಪ್ರಿಯಕರ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಂತೆ ಗಾಬರಿಗೊಂಡು ಯುವತಿ ಬೆಂಗಳೂರು ತೊರೆದಿದ್ದಾಳೆ. ಹೀಗಾಗಿ ಆಕೆಯನ್ನು ಸಂಪರ್ಕಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.