ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಕುಂಭ ಪ್ರದೇಶದ ಸೆಕ್ಟರ್ 18ರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಸದ್ಯಕ್ಕೆ ಸಾವು-ನೋವಿನ ಯಾವುದೇ ಮಾಹಿತಿ ಬಂದಿಲ್ಲ.
ಓಲ್ಡ್ ಜಿಟಿ ರಸ್ತೆಯ ತುಳಸಿ ಚೌರಾಹಾ ಸಮೀಪದ ಕ್ಯಾಂಪ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತತ್ ಕ್ಷಣವೇ ಅಗ್ನಿಶಾಮಕ ದಳದವರು ಕಾರ್ಯಪ್ರವೃತ್ತರಾಗಿ, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಖಾಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗೇಶ್ ಚತುರ್ವೇದಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮೌನಿ ಅಮಾವಾಸ್ಯೆಯ ದಿನದಂದು ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ, ಕರ್ನಾಟಕ ನಾಲ್ವರು ಸೇರಿದಂತೆ 30 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಅಲ್ಲದೆ, 2-3 ಬಾರಿ ಕುಂಭಪ್ರದೇಶದಲ್ಲಿ ಬೆಂಕಿ ಅವಘಡವೂ ಸಂಭವಿಸಿ, ಹಲವು ಟೆಂಟ್ ಗಳು ಅಗ್ನಿಗಾಹುತಿಯಾಗಿದ್ದವು. ಜ.13ರಿಂದ ಆರಂಭವಾಗಿರುವ ಮಹಾಕುಂಭಮೇಳವು ಫೆ.26ರವರೆಗೆ ನಡೆಯಲಿದೆ