ಚಾಮರಾಜನಗರ : 5 ಹುಲಿಗಳ ದಾರುಣ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿ ಗ್ರಾಮದ ಬಳಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಹನೂರು ವಲಯದ ಪಚ್ಚೆದೊಡ್ಡಿ ಗಸ್ತಿನಲ್ಲಿ ಮೃತಪಟ್ಟ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ.
ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಅರ್ಧ ಕಳೇಬರವೊಂದು ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು, ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಕಳೇಬರದ ಇನ್ನುಳಿದ ಭಾಗವನ್ನು ಹುಡುಕಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಇನ್ನು ಕಳ್ಳ ಬೇಟೆಗಾರರೇ ಹುಲಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಳ್ಳ ಬೇಟೆಯ ಪ್ರಕರಣವೆಂದೇ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಗೆ ಲಿಖಿತ ಆದೇಶ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಮಲೆಮಹದೇಶ್ವರ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತನಿಖಾ ತಂಡ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸಿದ್ದಾರೆ.
ಹಾಗೆಯೇ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ