ಮುಂಬೈ: ಕೇಂದ್ರ ಬಜೆಟ್ ನಲ್ಲಿ 12.75 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಭಾರಿ ಸಿಹಿ ಸುದ್ದಿ ನೀಡಿತ್ತು. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಮಧ್ಯಮ ವರ್ಗದವರು, ಮೇಲ್ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. ಹೌದು, ಆರ್ ಬಿಐ ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದ್ದು, ರೆಪೊ ದರವೀಗ ಶೇ.6.25ಕ್ಕೆ ಇಳಿದಿದೆ.
ರೆಪೊ ದರ ಇಳಿಕೆ ಮಾಡುವುದರಿಂದ ಗೃಹ ಸಾಲ, ವಾಹನ ಸಾಲ ಸೇರಿ ಹಲವು ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳು ಕಡಿಮೆ ಮಾಡಲಿವೆ. ಹಾಗಾಗಿ, ಈಗ ರೆಪೊ ದರ ಇಳಿಕೆ ಮಾಡಿರುವ ಕಾರಣ ಜನರಿಗೆ ಇಎಂಐ ಮೇಲಿನ ಬಡ್ಡಿಯ ಹೊರೆ ಇಳಿಕೆಯಾಗಲಿದೆ.
2023ರ ಫೆಬ್ರವರಿಯಿಂದಲೂ ಆರ್ ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡು ಬಂದಿದೆ. ಅದರಲ್ಲೂ, ಕಳೆದ ವರ್ಷವೇ ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಮೂರು ಬಾರಿ ರೆಪೊದರವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಭಾರತದಲ್ಲೂ ಕಳೆದ ವರ್ಷ ರೆಪೊ ದರ ಇಳಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ, ಜಿಡಿಪಿ ಬೆಳವಣಿಗೆ ಕುಂಠಿತ, ಹಣದುಬ್ಬರದ ಹೆಚ್ಚಳದ ಹಿನ್ನೆಲೆಯಲ್ಲಿ ಆರ್ ಬಿಐ ಕಾದು ನೋಡುವ ತಂತ್ರ ಅನುಸರಿಸಿತ್ತು. ಈಗ ರೆಪೊ ದರವನ್ನು ಕಡಿತಗೊಳಿಸಿ ಜನರಿಗೆ ಸಿಹಿ ಸುದ್ದಿ ನೀಡಿದೆ.
ಏನಿದು ರೆಪೊ ದರ?
ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಸಾಲಕ್ಕೆ ನಿಗದಿಪಡಿಸುವ ಬಡ್ಡಿದರವೇ ರೆಪೊ ದರ ಆಗಿದೆ. ಆರ್ ಬಿಐ ರೆಪೊದರವನ್ನು ಹೆಚ್ಚಳ ಮಾಡಿದರೆ, ಬ್ಯಾಂಕುಗಳು ಜನರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನೂ ಹೆಚ್ಚಳ ಮಾಡುತ್ತವೆ. ಹಾಗೆಯೇ, ರೆಪೊ ದರ ಇಳಿಕೆಯಾದರೆ ಜನರಿಗೆ ವಿಧಿಸುವ ಬಡ್ಡಿದರವನ್ನು ಕಡಿಮೆ ಮಾಡುತ್ತವೆ. ಕಡಿಮೆ ಮಾಡಿದರೆ ಜನರ ಗೃಹಸಾಲ, ವಾಹನ ಸಾಲದ ಮೇಲಿನ ಇಎಂಐ ಹೊರೆಯ ಭಾರ ಕಡಿಮೆಯಾಗುತ್ತದೆ. ಹಾಗಾಗಿ, ರೆಪೊ ದರದ ಏರಿಳಿತವು ಸಾರ್ವಜನಿಕರ ದೃಷ್ಟಿಯಿಂದ ಮಹತ್ವ ಪಡೆದಿದೆ.