ಬೀದರ್ : ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾದ ಆರೋಪದ ಮೇಲೆ ಮೊನ್ನೆ ಅಷ್ಟೇ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯ್ತಿ ಪಿಡಿಒ ಒಬ್ಬರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅಮಾನತು ಮಾಡಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳ ನಡುವೆ ಇದೀಗ ಮತ್ತೊಬ್ಬ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಹೌದು.. ಬೀದರ್ ಜಿಲ್ಲೆಯ ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಹಾಯಕರಾದ ಪ್ರಮೋದ್ ಎಂಬವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಸೆಪ್ಟೆಂಬರ್ 13ರಂದು ಬಸವಕಲ್ಯಾಣದಲ್ಲಿ ನಡೆದ RSS ಪಥ ಸಂಚಲನದಲ್ಲಿ ಪ್ರಮೋದ್ ಭಾಗಿಯಾಗಿದ್ದರು. ಇದೀಗ ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದೆಂದು ಪ್ರತಿಯಲ್ಲಿ ಉಲ್ಲೇಖಿಸಿ ತಾಲೂಕಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಡೆದ ಪಥಸಂಚಲನದಲ್ಲಿ ಹಲವು ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ. ಸದ್ಯ ಹೀಗಾಗಿ ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ನೌಕರರಲ್ಲಿ ಆತಂಕ ಮೂಡಿಸಿದೆ.