ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಧಕ್ಕಿದೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 21ಕ್ಕೆ ಏರಿಕೆಯಾಗಿವೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಏಳನೇ ದಿನ ಪುರುಷರ ಶಾಟ್ ಪುಟ್ ಎಫ್46 ವಿಭಾಗದಲ್ಲಿ ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಸಚಿನ್ ಸರ್ಜೆರಾವ್ ತಮ್ಮ ಎರಡನೇ ಪ್ರಯತ್ನದಲ್ಲಿ 16.32 ಮೀಟರ್ ದೂರ ಶಾಟ್ ಪುಟ್ ನ್ನು ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತೀಯರ ಪದಕ ಬೇಟೆ ಏಳನೆ ದಿನವೂ ಮುಂದುವರೆದಿದೆ.
ಈ ಪದಕದ ಗೆಲುವಿನೊಂದಿಗೆ ಭಾರತ 21 ಪದಕಗಳನ್ನು ಗೆದ್ದಂತಾಗಿದೆ. ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ 3 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಗೆಲ್ಲುವ ಮೂಲಕ ಭಾರತ ಒಟ್ಟು 21 ಪದಕಗಳನ್ನು ಗೆದ್ದಿದೆ. ಇನ್ನೂ ಕ್ರೀಡೆಗಳು ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಪದಕಗಳು ಗೆಲ್ಲುವ ನಿರೀಕ್ಷೆ ಇದೆ.
ಈ ಬಾರಿ ಇಲ್ಲಿಯವರೆಗೆ 21 ಪದಕಗಳನ್ನು ಗೆದ್ದಿರುವುದು ಭಾರತದ ಶ್ರೇಷ್ಠ ಸಾಧನೆಯಾಗಿದೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ, ಈ ಬಾರಿ ಆ ದಾಖಲೆಯನ್ನು ಈಗಾಗಲೇ ಮುರಿದು ಶ್ರೇಷ್ಠ ದಾಖಲೆ ಬರೆದಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಪದಕಗಳನ್ನು ಭಾರತ ಗೆದ್ದಿತ್ತು.