ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬಂದಿತ್ತು. ಈಗ ಮತ್ತೊಮ್ಮೆ ದರ ಏರಿಸಲು ಮುಂದಾಗಿದೆ.
ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರವು ಆಗಸ್ಟ್ ನಲ್ಲೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿತ್ತು. ಬಿಯರ್ ತಯಾರಿಕೆ ಕಂಪನಿಗಳು, ಮದ್ಯದಂಗಡಿ ಮಾಲೀಕರು ಹಾಗೂ ಗ್ರಾಹಕರಿಂದ ಅಬಕಾರಿ ಸುಂಕ ಹೆಚ್ಚಳದ ಕುರಿತು ಆಕ್ಷೇಪ ಸಲ್ಲಿಸಿದ್ದರು. ಈ ಮಧ್ಯೆ ಸರ್ಕಾರ ಸುಂಕ ಹೆಚ್ಚಳ ಮಾಡಲು ಮುಂದಾಗಿದೆ. ಈ ಮೂಲಕ ಒಂದೂವರೆ ವರ್ಷದಲ್ಲಿ ನಾಲ್ಕನೇ ಬಾರಿಗೆ ಬಿಯರ್ ದರ ಏರಿಕೆಯಾಗುತ್ತಿದೆ.
ಹೀಗಾಗಿ ಇನ್ನು ಮುಂದೆ ಬಿಯರ್ ದರ ಏರಿಕೆ ಕಾಣಲಿದೆ. 90 ರಿಂದ 95 ರೂ.ವರೆಗಿನ ಅಗ್ಗದ ಬಿಯರ್ ದರ 140 ರೂ.ವರೆಗೆ ಏರಿಕೆಯಾಗಬಹುದು. ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಬಿಯರ್ ಮಾರಾಟ ಶೇ.45ರಷ್ಟು ಏರಿಕೆ ಕಂಡಿದೆ. ದೇಶೀಯ ಮದ್ಯಕ್ಕೆ (ಐಎಂಎಲ್) ಹೋಲಿಸಿದರೆ ಬಿಯರ್ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿರುವ ಆದಾಯ ಕಡಿಮೆ. ಹೀಗಾಗಿ ಸರ್ಕಾರವು ಬಿಯರ್ ದರ ಏರಿಕೆ ಮಾಡಲು ಮುಂದಾಗುತ್ತಿದೆ.
2023ರ ಜುಲೈನಲ್ಲಿ ಎ ಬಿಯರ್ ದರವು 650 ಎಂ.ಎಲ್. ಬಾಟಲಿಗೆ 10 ರಿಂದ 15 ರೂ.ಗೆ ಏರಿಕೆಯಾಗಿತ್ತು. ಆನಂತರ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಏರಿಸಿತ್ತು. ನಂತರ 202 4ರ ಫೆ.1ರಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿತ್ತು. ಈಗ ದೇಶೀಯ ಮದ್ಯಗಳಂತೆಯೇ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಬಿಯರ್ ಗಳನ್ನೂ ಮೂರು ಸ್ಪ್ಯಾಬ್ ಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ.
ಅಂದರೆ, ಶೇ. 5ರ ವರೆಗೂ ಆಲ್ಕೋಹಾಲ್ ಅಂಶ ಇರುವ ಬಿಯರ್, ಶೇ.5ರಿಂದ 6.5ರಷ್ಟು ಹಾಗೂ ಶೇ.6.5ರಿಂದ 8ರ ವರೆಗೂ ಆಲ್ಕೋಹಾಲ್ ಇರುವ ಸ್ಪ್ಯಾಬ್ ಮಾಡಿ, ಕ್ರಮವಾಗಿ ಲೀಟರ್‌ಗೆ 10 ರೂ., 16 ರೂ. ಹಾಗೂ 20 ರೂ.ವರೆಗೆ ದರ ಏರಿಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.