ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಜಾಮೀನು ಸಂಕಷ್ಟ ಎದುರಾದ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ.
ಈಗಾಗಲೇ ನಟ ದರ್ಶನ್ ಕೆಳ ಹಂತದ ಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಅವರಿಗೆ ಇನ್ನೊಂದು ಪ್ರಕರಣದ ಸಂಕಷ್ಟ ಶುರುವಾಗಿದೆ. ಕನ್ನಡ ಚಿತ್ರರಂಗದ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ವ್ಯವಸ್ಥಾಪಕರ ವಿರುದ್ಧ ಅ. 1ರಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಅ. 18ರಂದು ದರ್ಶನ್ ಹಾಗೂ ಅವರ ವ್ಯವಸ್ಥಾಪಕರ ವಿರುದ್ಧ ಎನ್ ಸಿಆರ್ (ನಾನ್ – ಕಾಗ್ನಿಝೆಬಲ್ ರಿಪೋರ್ಟ್) ಸಲ್ಲಿಕೆಯಾಗಿದೆ.
2022ರಲ್ಲಿ ಭಗವಾನ್ ಶ್ರೀ ಕೃಷ್ಣ ಎಂಬ ಚಿತ್ರವನ್ನು ನಿರ್ಮಾಪಕ ಭರತ್ ಅವರು ನಿರ್ಮಿಸಿದ್ದರು. ಚಿತ್ರದ ನಾಯಕ ಧ್ರುವನ್ ಹಾಗೂ ನಿರ್ಮಾಪಕರ ನಡುವೆ ಅಸಮಾಧಾನವಾಗಿತ್ತು. ಧ್ರುವನ್ ಅವರು ಆ ವಿಚಾರವನ್ನು ನಟ ದರ್ಶನ್ ಮುಂದಿಟ್ಟಿದ್ದರು. ಆಗ ಮಧ್ಯಪ್ರವೇಶಿಸಿದ ನಟ ದರ್ಶನ್, ಫೋನ್ ಮೂಲಕ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಭರತ್, ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದರು. ಆಗ, ದೂರು ಸ್ವೀಕರಿಸಿ ಸುಮ್ಮನಾಗಿದ್ದ ಪೊಲೀಸರಿಗೆ ಭರತ್ ಅವರು ಇತ್ತೀಚೆಗೆ ಅದೇ ವಿಚಾರವಾಗಿ ಮತ್ತೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಪೊಲೀಸರು ಎನ್ ಸಿಆರ್ ವರದಿ ಸಿದ್ಧಪಡಿಸಿದ್ದಾರೆ.
ಎಫ್ಐಆರ್ ಗೂ ಎನ್ ಸಿಆರ್ ಗೂ ಸ್ವಲ್ಪ ವ್ಯತ್ಯಾಸವಿದೆ. ಕಳ್ಳತನ, ಕೊಲೆ, ದರೋಡೆ ಮುಂತಾದ ಉದ್ದೇಶಪೂರ್ವಕವಾದ ಗುರುತರ ಅಪರಾಧಗಳ ಆಧಾರದಲ್ಲಿ ಎಫ್ ಐಆರ್ ಸಿದ್ಧಪಡಿಸಲಾಗುತ್ತದೆ. ಅಪರಾಧದ ಉದ್ದೇಶವಿಲ್ಲದೆ ಮಾಡುವ ಕೊಲೆ ಬೆದರಿಕೆ, ಜಗಳ ತೆಗೆಯುವುದು, ಜಗಳದ ನಡುವೆ ಹೊಡೆಯುವುದು ಸೇರಿದಂತೆ ಕೆಲವು ಪ್ರಕರಣಗಳಿಗೆ ಎನ್ ಸಿಆರ್ ದಾಖಲಿಸಲಾಗುತ್ತದೆ. ಎನ್ ಸಿಆರ್ ನಲ್ಲಿ ನ್ಯಾಯಾಲಯದಿಂದ ವಾರಂಟ್ ಪಡೆದ ನಂತರವಷ್ಟೇ ಆರೋಪಿಯನ್ನು ಬಂಧಿಸಬೇಕಿರುತ್ತದೆ. ಹೀಗಾಗಿ ದರ್ಶನ್ ಗೆ ಸಂಕಷ್ಟ ಶುರುವಾದಂತಾಗಿದೆ.