ಬೆಂಗಳೂರು: ದೊಡ್ಮನೆ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ ಚಿತ್ರರಂಗ ಪ್ರವೇಶಿಸಿದ್ದಾರೆ. “ನಿಂಬಿಯಾ ಬನಾದ ಮ್ಯಾಗ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದು, ಷಣ್ಮುಖ, ಡಾ. ರಾಜಕುಮಾರ್ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜು ಅವರ ಪುತ್ರ.
ವಿ.ಮಾದೇಶ್ ನಿರ್ಮಾಣದ, ಅಶೋಕ್ ಕಡಬ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚಿಗೆ A2 music ಮೂಲಕ ಬಿಡುಗಡೆಯಾಗಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ನ್ನು ವಿಕ್ಷಿಸಿದ ಶಿವರಾಜಕುಮಾರ್, ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ.
ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ನ್ನು ಸದ್ಯದಲ್ಲೇ ಶಿವರಾಜಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ. ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಶ್ರೀಮುರಳಿ ಸಹ ಟೀಸರ್ ನೋಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು ( ಅಚ್ಚಣ್ಣ ) ಕಾಣೆಯಾಗಿದೆ.ಆ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ.
ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ” ನಿಂಬಿಯಾ ಬನಾದ ಮ್ಯಾಗ – ಪೇಜ್ – 1″ ಚಿತ್ರದ ಕಥಾ ಸಾರಾಂಶ ಎನ್ನುತ್ತಾರೆ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವ ಅಶೋಕ್ ಕಡಬ.
“ನಿಂಬಿಯಾ ಬನಾದ ಮ್ಯಾಗ” ಚಿತ್ರದ ಪೇಜ್ 1 ಹಾಗೂ ಪೇಜ್ 2 ಎಂದು ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಪೇಜ್ 1 ಬಿಡುಗಡೆಯಾಗಲಿದೆ. ಪೇಜ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದೆ.
“ಮೇಘಮಾಲೆ” ಚಿತ್ರದ ಖ್ಯಾತಿಯ ಸುನಾದ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತ್ರಿಶಾ(ಚೆನ್ನೈ), ಪಂಕಜ್ ನಾರಾಯಣ್, ಸಂಗೀತ, ಭವ್ಯ, ರಾಮಕೃಷ್ಣ, ಮೂಗು ಸುರೇಶ್, ಪದ್ಮಾ ವಾಸಂತಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.