ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ದೊಡ್ಡ ತಲೆನೋವಾಗಿದೆ. ಇದರ ಮಧ್ಯೆ ಈಗ ಮುಡಾದ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಮುಡಾದಲ್ಲಿ ಸಾಧಕರ ಕೋಟಾದಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಕರೆದು ಮುಂಗಡ ಹಣ ಕಟ್ಟಿಸಿಕೊಂಡರೂ ಇದುವರೆಗೆ ನಿವೇಶನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕ್ರೀಡಾಪಟುಗಳಾದ ರವಿ ಮತ್ತು ಎಂ.ಪಿ. ಅಜಿತ್ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
2023ರಲ್ಲಿ 188 ಜನ ಸಾಧಕರಿಗೆ ದೇವನೂರು ಬಡಾವಣೆ 3ನೇ ಹಂತದಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಕರೆದು ಮುಂಗಡ ಹಣ ಪಾವತಿಗೆ 28 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅಂತಾರಾಷ್ಟ್ರೀಯ ಚೆಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಹಾಗೂ ಸದ್ಯ ಅಂತಾರಾಷ್ಟ್ರೀಯ ಚೆಸ್ ತರಬೇತುದಾರರಾಗಿರುವ ಎಂ.ಜಿ. ಅಜಿತ್ ಅವರಿಗೆ ಇದುವರೆಗೆ ಸೈಟ್ ನೀಡಿಲ್ಲ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಜಿ. ಅಜಿತ್, ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಾನು 4060 ವಿಸ್ತೀರ್ಣದ ನಿವೇಶನಕ್ಕಾಗಿ ಮುಡಾಗೆ ಅರ್ಜಿ ಸಲ್ಲಿಸಿದ್ದೇನೆ. ಶೇ. 10ರಷ್ಟು 2.9 ಲಕ್ಷ ರೂ. ಮುಂಗಡ ಹಣ ಪಾವತಿಸಿ 22 ತಿಂಗಳಾಗಿವೆ. ಆದರೂ ಇಲ್ಲಿಯವರೆಗೆ ನಿವೇಶನ ನೀಡಿಲ್ಲ. ಈ ಕುರಿತು ಪ್ರಶ್ನಿಸಿದರೆ ನೀವು ಕಟ್ಟಿರುವ ಹಣ ಹಿಂಪಡೆದುಕೊಳ್ಳಿ ಎಂಬ ಹಾರಿಕೆ ಉತ್ತರ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಅಥ್ಲೆಟಿಕ್ ಆಟಗಾರ ರವಿ ಕೂಡ 3040 ವಿಸ್ತೀರ್ಣದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 1.6 ಲಕ್ಷ ರೂ. ಮುಂಗಡ ಹಣ ನೀಡಿದ್ದಾರೆ. ಅವರಿಗೂ ನಿವೇಶನ ಹಂಚಿಕೆ ಮಾಡಿಲ್ಲ ಎನ್ನಲಾಗಿದೆ