ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮತ್ತೆ ಇಬ್ಬರು ಅಧಿಕಾರಿಗಳ ಜಟಾಪಟಿ ಶುರುವಾಗಿದೆ. ಐಪಿಎಸ್ ಅಧಿಕಾರಿ ರೂಪಾ (Roopa Moudgil) ವಿರುದ್ಧ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್ ಹಾಗೂ ಡಿಐಜಿ ವರ್ತಿಕಾ ಕಟಿಯಾರ್ (Vartika Katiyar) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.
ರೂಪಾ ಅವರು ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆ ಕಳವು ಮಾಡಿಸಿದ್ದಾರೆ. ಆ ದಾಖಲೆಗಳನ್ನು ನಕಲಿ ಮಾಡಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಆರೋಪಿಸಿದ್ದಾರೆ.
ಹೀಗಾಗಿ ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಕೆಳಹಂತದ ಮೂವರು ಅಧಿಕಾರಿಗಳನ್ನು (ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್) ಬಳಸಿ ದಾಖಲೆ ಕಳ್ಳತನ ಮಾಡಿದ್ದಾರೆ. ವಾಟ್ಸಪ್ ಮೂಲಕ ಫೋಟೋ ತೆಗೆಸಿದ್ದಾರೆ. ಕಂಟ್ರೋಲ್ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ ಎಂದು ಆರೋಪಿಸಿದ್ದಾರೆ.