ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಹಲವು ಕ್ಷೇತ್ರಗಳಲ್ಲಿ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಈಗ ಮತ್ತೊಮ್ಮೆ ಶಾಕ್ ನೀಡಲು ಮುಂದಾಗಿದೆ.
ಇತ್ತೀಚೆಗಷ್ಟೇ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಈಗ ಮತ್ತೊಮ್ಮೆ ದರ ಏರಿಕೆ ಮುಂದಾಗಿದೆ ಎನ್ನಲಾಗಿದೆ. ಇಂದು ರಾತ್ರಿಯಿಂದಲೇ ನೂತನ ದರ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲೀಟರ್ ಹಾಲಿನ ದರ ಸುಮಾರು 3 ರಿಂದ 5 ರೂ. ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದರ ಏರಿಕೆ ಮಾಡಿದರೂ ಈ ಹಣವನ್ನು ಮಂಡಳಿ ಪಡೆಯುವುದಿಲ್ಲ. ಬದಲಾಗಿ ರೈತರಿಗೆ ಹೆಚ್ಚುವರಿ ಹಣ ನೀಡುತ್ತದೆ. ವಿಧಾನಸಭೆಯಲ್ಲಿ ಕೂಡ ಕೆಎಂಎಫ್ ಅಧ್ಯಕ್ಷರು ಈ ಕುರಿತು ಮಾತನಾಡಿದ್ದರು.
ಇದರ ಬೆನ್ನಲ್ಲೇ ಇಂದು ಸಿಎಂ ಗೃಹ ಕಚೇರಿಯಲ್ಲಿ ಮಹತ್ವದ ಸಭೆ ನಿಗದಿಯಾಗಿದೆ.ಕೆಎಂಎಫ್ ಅಧ್ಯಕ್ಷ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಸಿಎಂ ಒಪ್ಪಿಗೆಯ ನಂತರ ದರ ಏರಿಕೆ ಕುರಿತು ಮಾಹಿತಿ ಸಿಗಲಿದೆ. ಆದರೆ, ಸದ್ಯದ ಮಾಹಿತಿಯಂತೆ ಗ್ರಾಹಕರಿಗೆ ಹೊರೆ ಬೀಳುವುದು ಖಚಿತ ಎನ್ನಲಾಗುತ್ತಿದೆ.