ವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣ ಇಡೀ ದೇಶವೇ ಮಮ್ಮಲ ಮರಗುತ್ತಿರುವ ಈ ಹೊತ್ತಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದುಹೋಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಯಿಂದ ಡೆಹ್ರಾಡೋನ್ ಕಡೆ ಸಾಗುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಂತ ಹೀನಾಯವಾಗಿ ಅತ್ಯಾಚಾರಗೈದ ಪ್ರಕರಣದಲ್ಲಿ ಐವರು ಆರೋಪಿಗಳ ಬಂಧನವಾಗಿದೆ. ಕಳೆದ ಭಾನುವಾರ ಉತ್ತರಖಂಡ್ ಪೊಲೀಸರು ಐವರು ಅತ್ಯಾಚಾರಿಗಳನ್ನು ಬಂಧಿಸಿದ್ದು, ಸಾರ್ವಜನಿಕ ವಲಯದಲ್ಲಿ ಕ್ರೋದಾಗ್ನಿ ಭುಗಿಲೆದ್ದಿದೆ.

ಆಗಸ್ಟ್ ಹನ್ನೆರಡರ ರಾತ್ರಿ ನಡೆದಿದೆ ಎನ್ನಲಾದ ಈ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಸರ್ಕಾರಿ ಬಸ್ಸಿನ ಚಾಲಕ, ನಿರ್ವಾಹಕರೂ ಸೇರಿದ್ದು, ಆತಂಕ ಹೆಚ್ಚಿಸಿದೆ. ಇನ್ನು ಅಂದು ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಹುಡುಗಿ ಶನಿವಾರ ರಾತ್ರಿ ಒಬ್ಬಳೇ ಅಳುತ್ತಾ ಕುಳಿತಿದ್ದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಆಕೆಯನ್ನು ಅಂದೇ ಸುರಕ್ಷಿತವಾಗಿ ಹತ್ತಿರದ ಬಾಲ ನಿಕೇತನಕ್ಕೆ ಸೇರಿಸಲಾಗಿತ್ತು.