ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೊಂದು ಬಹು ಕೋಟಿ ಹಗರಣ ಬಯಲಾಗಿದೆ. ಮಾರ್ಷಲ್ ಗಳ ನೇಮಕಾತಿಯಲ್ಲಿ ಬಹುದೊಡ್ಡ ಹಗರಣವಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಅಲ್ಲದೇ, ದಾಖಲೆ ಸಮೇತ ಇಡಿ ಹಾಗೂ ಲೋಕಯುಕ್ತ ಕಚೇರಿಗೆ ಎನ್.ಆರ್. ರಮೇಶ್ ದೂರು ನೀಡಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಹಾಗೂ ಕೆರೆ ರಕ್ಷಣೆಗೆಂದು 770 ಮಾರ್ಷಲ್ ಗಳ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಈ ನೇಮಕಾತಿಯಲ್ಲಿ ಅರ್ಧದಷ್ಟು ಜನರನ್ನು ನೇಮಕಾತಿ ಮಾಡಿಕೊಂಡಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಪ್ರತಿ ತಿಂಗಳು ಸಂಬಳ ಡ್ರಾ ಮಾಡಲಾಗುತ್ತಿತ್ತು ಎಂದು ಆರೋಪ ಮಾಡಿದ್ದಾರೆ.
ಈಗ ಮತ್ತೆ 300 ಜನರ ನೇಮಕಾತಿಗೆ ಅರೋಗ್ಯ ಇಲಾಖೆಯಿಂದ ಟೆಂಡರ್ ಅಹ್ವಾನಿಸಲಾಗಿದೆ. ಇತ್ತ ಮಾರ್ಷಲ್ ಗಳ ನೇಮಕಾತಿಯಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು, ಅದರ ಬದಲಾಗಿ ಎನ್ ಸಿಸಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಮಾರ್ಷಲ್ ಗಳ ವೇತನ 25 ಸಾವಿರ ಇದೆ. ಆದರೆ, ಮಾರ್ಷಲ್ ಗಳಿಗೆ ಕೇವಲ 17 ಸಾವಿರ ವೇತನ ಪಾವತಿ ಮಾಡಲಾಗುತ್ತಿದೆ. ಈ ಕುರಿತು ಅಡಿಟ್ ನಲ್ಲಿ ಹಲವು ಬಾರಿ ಆಕ್ಷೇಪಣೆ ಮಾಡಲಾಗಿತ್ತು. ಅಡಿಟ್ ಗೆ ಕ್ಯಾರೆ ಅನ್ನದೆ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಪ್ರತಿ ಒಬ್ಬ ಮಾರ್ಷಲ್ ಗೆ ಪಾಲಿಕೆಯಿಂದ ವಿಮಾ ಮಾಡಿಸಲಾಗಿದೆ. ಅದರೆ ವಿಮಾ ಹಣ ಪಡೆದುಕೊಳ್ಳದೆ, ಬಿಬಿಎಂಪಿಯಿಂದ ಅಸ್ಪತ್ರೆ ವೆಚ್ಚ ಭರಿಸಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಪಾಲಿಕೆ ಮುಖ್ಯ ಅಯುಕ್ತರು, ವಿಶೇಷ ಅಯುಕ್ತರು, ಪಾಲಿಕೆ ಆಡಳಿತಾಧಿಕಾರಿ, ಮಾರ್ಷಲ್ ಚೀಪ್ ಸೇರಿದಂತೆ 16 ಜನರ ಮೇಲೆ ದೂರು ದಾಖಲಿಸಿದ್ದಾರೆ.