ಮುಂಬಯಿ: ಹಿರಿಯ ಗಾಯಕ ಉದಿತ್ ನಾರಾಯಣ್ (Udit Narayan) ಇತ್ತೀಚೆಗೆ ಕಿಸ್ ನಿಂದ ಭಾರೀ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕಾನ್ಸರ್ಟ್ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯ ತುಟಿಗೆ ಚುಂಬಿಸಿದ ವಿಡಿಯೋ ವೈರಲ್ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮತ್ತೆ ಅಂತಹ ವಿಡಿಯೋ ವೈರಲ್ ಆಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ.
ಇತ್ತೀಚೆಗೆ ಚುಂಬನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮರ್ಥಿಸಿಕೊಂಡಿದ್ದ ಉದಿತ್ ನಾರಾಯಣ್, ‘ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಹೇಳಿದ್ದರು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಉದಿತ್ ನಾರಾಯಣ್ ವೇದಿಕೆ ಮೇಲೆ ಹಾಡುತ್ತಿದ್ದ ವೇಳೆ ಮಹಿಳಾ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಉದಿತ್, ಓರ್ವ ಅಭಿಮಾನಿಯ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಮತ್ತೋರ್ವ ಫ್ಯಾನ್ಗೆ ತುಟಿಗೆ ಕಿಸ್ ಮಾಡಿದ್ದಾರೆ. ‘ಉದಿತ್ ನಾರಾಯಣ್ ಅವರ ಮತ್ತೊಂದು ವಿಡಿಯೋ’ ಎಂದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.