ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸರಣಿ ಹತ್ಯೆಗಳು ಮುಂದುವರಿದಿದ್ದು, ಕಾಲಿಗಂಜ್ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಲಿಟನ್ ಚಂದ್ರ ದಾಸ್ (60) ಎಂಬ ಹಿಂದೂ ವ್ಯಾಪಾರಿಯನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಹೊಡೆದು ಅಮಾನವೀಯವಾಗಿ ಹತ್ಯೆ ಮಾಡಿದೆ.
ಹೋಟೆಲ್ ಮತ್ತು ಸಿಹಿ ತಿಂಡಿ ಅಂಗಡಿಯ ಮಾಲೀಕರಾಗಿದ್ದ ಲಿಟನ್ ಚಂದ್ರ ದಾಸ್, ಗ್ರಾಹಕರೊಂದಿಗಿನ ಸಣ್ಣ ವಾಗ್ವಾದದ ನಂತರ ನಡೆದ ಗುಂಪು ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯು ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಶನಿವಾರ ಬೆಳಿಗ್ಗೆ ಲಿಟನ್ ಅವರ ಅಂಗಡಿಯ ಉದ್ಯೋಗಿ ಅನಂತ ದಾಸ್ ಮತ್ತು ಗ್ರಾಹಕರೊಬ್ಬರ ನಡುವೆ ಸಣ್ಣ ವಿಷಯಕ್ಕೆ ವಾಗ್ವಾದ ನಡೆದಿತ್ತು. ತನ್ನ ಉದ್ಯೋಗಿಯನ್ನು ರಕ್ಷಿಸಲು ಲಿಟನ್ ಮಧ್ಯಪ್ರವೇಶಿಸಿದಾಗ, ಆಕ್ರೋಶಗೊಂಡ ಗುಂಪು ಅವರ ಮೇಲೆ ಮುಗಿಬಿದ್ದಿದೆ. ಮೊದಲು ಕೈಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು, ನಂತರ ಅಲ್ಲೇ ಇದ್ದ ಕಬ್ಬಿಣದ ಅಸ್ತ್ರದಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಲಿಟನ್ ಚಂದ್ರ ದಾಸ್, ಸ್ಥಳೀಯರು ಸಹಾಯಕ್ಕೆ ಧಾವಿಸುವ ಮೊದಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.
18 ದಿನಗಳಲ್ಲಿ ನಡೆದ ಸರಣಿ ಹತ್ಯೆಗಳು
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ವಿರೋಧಿ ಅಲೆ ತೀವ್ರಗೊಳ್ಳುತ್ತಿದ್ದು, ಕೇವಲ ಕಳೆದ 18 ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದ ದಾಳಿಗಳ ಅಂಕಿಅಂಶಗಳು ಕಳವಳಕಾರಿಯಾಗಿವೆ. ಕಳೆದ ತಿಂಗಳು ದೀಪು ಚಂದ್ರ ದಾಸ್ ಎಂಬ ಕಾರ್ಮಿಕನನ್ನು ಧರ್ಮನಿಂದನೆಯ ಆರೋಪದ ಮೇಲೆ ಗುಂಪೊಂದು ಸಜೀವ ದಹನ ಮಾಡಿತ್ತು. ಹಾಗೆಯೇ, ರಾಜ್‌ಬಾರಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಮೃತ್ ಮೊಂಡಲ್ ಎಂಬುವವರನ್ನು ಸುಲಿಗೆ ಆರೋಪದ ಮೇಲೆ ಹೊಡೆದು ಕೊಲ್ಲಲಾಗಿತ್ತು. ಒಟ್ಟಾರೆಯಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ಕನಿಷ್ಠ 9 ಹಿಂದೂಗಳು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪೆಟ್ರೋಲ್ ಬಂಕ್ ನೌಕರನ ಹತ್ಯೆ
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ರಿಪನ್ ಸಹಾ ಎಂಬ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೂ ಹತ್ಯೆಗೈಯ್ಯಲಾಗಿದೆ. ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಗುಂಪು, ಹಣ ಪಾವತಿಸದೇ ಪರಾರಿಯಾಗುತ್ತಿತ್ತು. ಈ ವೇಳೆ ಆ ವಾಹನವನ್ನು ಅಡ್ಡಗಟ್ಟಿ ಹಣ ಪಾವತಿಸುವಂತೆ ಹಿಂದೂ ಸಿಬ್ಬಂದಿ ರಿಪನ್ ಸಹಾ ಕೇಳಿಕೊಂಡಾಗ, ಆತನ ಮೇಲೆಯೇ ಕಾರು ಹರಿಸಿ ಕೊಲೆಗೈಯ್ಯಲಾಗಿದೆ. ಈ ವಾಹನವು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕನಿಗೆ ಸೇರಿದ್ದೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮಣಿಪುರ ಗ್ಯಾಂಗ್‌ರೇಪ್ ಸಂತ್ರಸ್ತೆ ಸಾವು | ನ್ಯಾಯಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆದ ಕುಕಿ ಯುವತಿ



















