ಕೆನಡಾ : ಭಾರತದ ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಸರೆ ನಗರದಲ್ಲಿರುವ ‘ಕ್ಯಾಪ್ಸ್ ಕೆಫೆ’ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಕಳೆದ ನಾಲ್ಕು ತಿಂಗಳೊಳಗೆ ಇದೇ ಕೆಫೆ ಮೇಲೆ ನಡೆದ ಮೂರನೇ ದಾಳಿ ಇದಾಗಿದ್ದು, ಈ ದಾಳಿಯ ಜವಾಬ್ದಾರಿಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರರು ಸಾಮಾಜಿಕ ಜಾಲತಾಣದ ಮೂಲಕ ಒಪ್ಪಿಕೊಂಡಿದ್ದಾರೆ.
ಕಪಿಲ್ ಶರ್ಮಾ ಅವರ ಕೆಫೆ ಮೇಲೆ ನಡೆದ ಈ ದಾಳಿ ಕೆನಡಾದಲ್ಲಿನ ಭಾರತೀಯ ಉದ್ಯಮಿಗಳ ಭದ್ರತಾ ಪರಿಸ್ಥಿತಿಯ ಬಗ್ಗೆ ಆತಂಕವನ್ನು ಹುಟ್ಟಿಸಿದೆ. ದಾಳಿ ವೇಳೆ ಯಾರಿಗೂ ಗಾಯವಾಗಿಲ್ಲದಿದ್ದರೂ, ಮೂರು ಬಾರಿ ಒಂದೇ ಸ್ಥಳ ಗುರಿಯಾಗಿರುವುದು ಅಧಿಕಾರಿಗಳಿಗೆ ದೊಡ್ಡ ಪ್ರಶ್ನೆ ಎತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಗುಂಡಿನ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್‌ಗನ್‌ನಿಂದ ಗುಂಡು ಹಾರಿಸಿರುವುದು ಕಂಡುಬಂದಿದೆ. ಹಾರಿಸಿದ ಗುಂಡುಗಳು ಕೆಫೆಯ ಕಿಟಿಕಿ ಹಾಗೂ ಗೋಡೆಗೆ ತಾಗಿದೆ. ಗುಂಡಿನ ದಾಳಿ ನಡೆದ ಸಮಯದಲ್ಲಿ ಕೆಫೆಯೊಳಗೆ ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸದ್ಯ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಹಚರರಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ದಾಳಿಯ ಹೊಣೆ ಹೊತ್ತಿದ್ದಾರೆ.ನಮಗೆ ಸಾರ್ವಜನಿಕರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ ನಮಗೆ ಮೋಸ ಮಾಡುವವರಿಗೆ ನಾವು ಎಚ್ಚರಿಕೆ ನೀಡುತ್ತೇವೆ. ಗುಂಡು ಎಲ್ಲಿಂದಾದರೂ ಬರಬಹುದು ನಮ್ಮ ಧರ್ಮದ ವಿರುದ್ಧ ಮಾತನಾಡುವ ಬಾಲಿವುಡ್ ವ್ಯಕ್ತಿಗಳು ಕೂಡ ಸಿದ್ಧರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಎರಡು ಬಾರೀ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಜು.9ರಂದು ಮೊದಲ ಬಾರೀ ಗುಂಡಿನ ದಾಳಿ ನಡೆದಾಗ ಜರ್ಮನಿ ಮೂಲದ ಬಿಕೆಐ ಉಗ್ರಗಾಮಿ ಹರ್ಜಿತ್ ಸಿಂಗ್ ಹಾಗೂ ಆ.7ಎಂದು ಎರಡನೇ ಬಾರೀ ನಡೆದಾಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೊಣೆ ಹೊತ್ತುಕೊಂಡಿತ್ತು