ಮಂಡ್ಯ: ವಂಚಕಿ ಐಶ್ವರ್ಯಗೌಡ (Aishwarya Gowda) ವಿರುದ್ಧ ಮತ್ತೊಂದು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
2 ದಿನಗಳ ಹಿಂದೆಯಷ್ಟೇ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದಲ್ಲಿ ಐಶ್ವರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈಗ ಮಂಡ್ಯದಲ್ಲಿ (Mandya) ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ಚಾಮುಂಡೇಶ್ವರಿನಗರದ ಭಾಗ್ಯಮ್ಮ ಎಂಬುವವರು ಐಶ್ವರ್ಯಾಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಶ್ವರ್ಯಗೌಡ ವಿರುದ್ಧ ಐಪಿಸಿ ಸೆಕ್ಷನ್ 406, 420, 417, 120ಬಿ, 540, 34ರ ಅಡಿ ಕೇಸ್ ದಾಖಲಾಗಿದೆ. ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವವರ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ.
2017ರ ಜನವರಿಯಿಂದ ಜೂನ್ ತಿಂಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್(Real estate) ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಐಶ್ವರ್ಯ ನಂಬಿಸಿ 33 ಲಕ್ಷ ರೂ. ನಗದು ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನ ಪಡೆದುಕೊಂಡಿದ್ದಾಳೆ. ಆದರೆ, ಯಾವ ಹಣವನ್ನೂ ಮರಳಿ ನೀಡಿಲ್ಲ. ಇದು ತನ್ನ ಮೃತ ಗಂಡನ ನಿವೃತ್ತಿಯ ಹಣ ಆಗಿದೆ. 1 ಲಕ್ಷಕ್ಕೆ 10 ಪರ್ಸೆಂಟ್ ಬಡ್ಡಿ ಹಣ ನೀಡುವುದಾಗಿ ಆಮಿಷ ಒಡ್ಡಿ ಹಣ ಪಡೆದ ಐಶ್ವರ್ಯ ವಂಚನೆ ಎಸಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈಗಾಗಲೇ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವವರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. 55 ಲಕ್ಷ ನಗದು ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.