ಬೆಂಗಳೂರು: ಕುಕ್ಕರ್ ಸ್ಫೋಟಗೊಂಡ ಪರಿಣಾಮ ಓರ್ವ ಯುವಕ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರದಲ್ಲಿ ನಡೆದಿದೆ. ಮೋಸಿನ್ ಸಾವನ್ನಪ್ಪಿರುವ ವ್ಯಕ್ತಿ. ಸಮೀರ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರೂ ಯುವಕರು ಯುಪಿ ಮೂಲದವರು. ಈ ಸ್ಫೋಟ ಕೂಡ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮಾದರಿಯಲ್ಲೇ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಇಬ್ಬರು ಯುವಕರು ಮಲಗಿದ್ದಾರೆ. ಆಗ ಹೀಟ್ ಹೆಚ್ಚಾಗಿ ಸ್ಪೋಟಗೊಂಡಿದೆ ಎಂಬುವುದು ಮೇಲ್ನೊಟಕ್ಕೆ ತಿಳಿದು ಬಂದಿದೆ. ಕುಕ್ಕರ್ ಸ್ಫೋಟವಾಗಿ ಬಲ್ಬ್ ಗೆ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ರೂಮ್ ಗೆ ಕೂಡ ಬೆಂಕಿ ಹೊತ್ತಿಕೊಂಡಿದೆ. ಆದರೆ, ನಿಖರ ಕಾರಣ ತಿಳಿದು ಬಂದಿಲ್ಲ. ಉಗ್ರ ಕೃತ್ಯದ ರೀತಿಯಲ್ಲಿ ಯಾವ ಸಾಕ್ಷಿಗಳು ಪತ್ತೆ ಆಗಿಲ್ಲ. ಈಗಾಗಲೇ ನುರಿತ ತಜ್ಞರಿಂದ ಪರಿಶೀಲನೆ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಆಗಿರುವ ಘಟನೆ ಇದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಘಟನಾ ಸ್ಥಳದಲ್ಲಿ ಸುಟ್ಟ ವೈರ್ಗಳು ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ.