ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಾಣಂತಿ ಸಾವು ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಗುವಿಗೆ ಜನ್ಮ ನೀಡಿದ ನಂತರ ಬಾಣಂತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ ಎಂಬ ಬಾಣಂತಿ ಸಾವನ್ನಪ್ಪಿರುವ ಬಾಣಂತಿ ಎನ್ನಲಾಗಿದೆ. ಮದುವೆಯಾಗಿ ಹನ್ನೆರಡು ವರ್ಷದ ನಂತರ ಗರ್ಭವತಿಯಾಗಿದ್ದ ಅಂಜಲಿಯನ್ನು ಹೆರಿಗೆ ಮಾಡಿಸಲು ಸೋಮವಾರ ಬೀಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು.
ಹೆರಿಗೆಯಾದ ಸಂದರ್ಭದಲ್ಲಿ ಎಂದಿನಂತೆ ಇದ್ದ ಅಂಜಲಿ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ವೈದ್ಯರು ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರೆ ವೈದ್ಯರ ನಿರ್ಲಕ್ಷದಿಂದಲೇ ಅಂಜಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಗೋಳಾಡಿದ್ದಾರೆ. ಎಪಿಎಂಸಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.