ರಾಯಚೂರು: ಹೊಸ ವರ್ಷದ ಮೊದಲ ದಿನವೇ ರಾಜ್ಯದಲ್ಲಿ ಮತ್ತೊಂದು ಬಾಣಂತಿ ಹಾಗೂ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ರಿಮ್ಸ್ ನಲ್ಲಿ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಬಾಣಂತಿ ಹಾಗೂ ಶಿಶು ಮರಣದ ಸುದ್ದಿ ರಾಜ್ಯದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ, ಕಳೆದ ನಾಲ್ಕು ತಿಂಗಳಿನಲ್ಲಿ ರಿಮ್ಸ್ ನಲ್ಲಿ 10 ಜನ ಬಾಣಂತಿಯರು ಕೂಡ ಸಾವನ್ನಪ್ಪಿದ್ದರು. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ ಕಂಡಿದೆ.
ದೇವದುರ್ಗ (Devadurga) ತಾಲೂಕಿನ ಮಸೀದಪೂರ ಗ್ರಾಮದ ಶಿವಲಿಂಗಮ್ಮ (22) ಸಾವನ್ನಪ್ಪಿದ್ದಾರೆ. ತಾಯಿಗಿಂತಲೂ ಮೊದಲು ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಅಧಿಕ ರಕ್ತದೊತ್ತಡ ಹಾಗೂ ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದಾಗಿ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಣಂತಿ ಹಾಗೂ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.